ಕೇರಳ ರಾಜ್ಯ ಸಾರಿಗೆ ಸಚಿವ - ಬಸ್ ಮಾಲಕರ ಸಂಘದ ಮಾತುಕತೆ ವಿಫಲ
ಮುಷ್ಕರ ಮುಂದುವರಿಕೆ
ಕಾಸರಗೋಡು,ಫೆ.18 : ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರವನ್ನು ಇತ್ಯರ್ಥಗೊಳಿಸಲು ರಾಜ್ಯ ಸಾರಿಗೆ ಸಚಿವ ಎ.ಕೆ.ಶಶೀ೦ದ್ರನ್ ರವರು ಬಸ್ ಮಾಲಕರ ಸಂಘದ ಪ್ರತಿನಿಧಿಗಳ ಜೊತೆ ನಡೆಸಿದ ಮಾತುಕತೆ ವಿಫಲಗೊಂಡಿದ್ದು, ಮುಷ್ಕರ ಮುಂದುವರಿಸಿಕೊಂಡು ಹೋಗಲು ಮಾಲಕರು ತೀರ್ಮಾನಿಸಿದ್ದಾರೆ
ಇಂದು ಸಂಜೆ ಕಲ್ಲಿಕೋಟೆ ಅತಿಥಿಗ್ರಹದಲ್ಲಿ ಬಸ್ಸು ಮಾಲಕರ ಸಂಘದ ರಾಜ್ಯ ಪದಾಧಿಕಾರಿಗಳ ಜೊತೆ ಮೂರು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ .ಕನಿಷ್ಠ ದರವನ್ನು 8 ರೂ . ಗೆ ಹಚ್ಚಳಗೊಳಿಸಿದ ಬಗ್ಗೆ ಮಾಲಕರು ಸಮ್ಮತಿ ವ್ಯಕ್ತಪಡಿಸಿದ್ದರೂ ಪ್ರಮುಖವಾಗಿ ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಳ ಮಾಡಬೇಕೆಂದು ಪಟ್ಟು ಹಿಡಿದಿದ್ದು , ಆದರೆ ವಿದ್ಯಾರ್ಥಿಗಳ ರಿಯಾಯಿತಿ ದರ ಏರಿಕೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಸಭೆಗೆ ತಿಳಿಸಿದರು.
ಇದಕ್ಕೆ ಮಾಲಕರ ಸಂಘದ ಪ್ರತಿನಿಧಿಗಳು ಅಸಮ್ಮತಿ ವ್ಯಕ್ತಪಡಿಸಿದ್ದು , ಇದರಿಂದ ಸಭೆ ತೀರ್ಮಾನವಾಗದೆ ವಿಫಲಗೊಂಡಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲಕರ ಸಂಘದ ಪ್ರತಿನಿಧಿಗಳು, ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಏರಿಕೆ ಅನಿವಾರ್ಯ. ಇಂದಿನ ಸ್ಥಿತಿಯಲ್ಲಿ ದರ ಏರಿಕೆ ಮಾಡದಿದ್ದಲ್ಲಿ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ರಿಯಾಯಿತಿ ದರದ ಬಗ್ಗೆ ಯಾವುದಾದರೂ ತೀರ್ಮಾನ ಸರಕಾರ ತೆಗೆದುಕೊಳ್ಳಬೇಕು . ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದರು.







