ಕಾಂತಾವರದಲ್ಲಿ ಮುದ್ದಣ ಸಾಹಿತ್ಯೋತ್ಸವ, ನಾಡಿಗೆ ನಮಸ್ಕಾರ ಕೃತಿಗಳ ಲೋಕಾರ್ಪಣೆ
ಜ್ಯೋತಿ ಗುರುಪ್ರಸಾದ್‍ರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ, ಫೆ.18: ಕಾಂತಾವರದ ಕನ್ನಡ ಸಂಘದ ವತಿಯಿಂದ ಕನ್ನಡ ಭವನದ ಆವರಣದಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವ 2018ರಲ್ಲಿ ಸಾಹಿತಿ ಜ್ಯೋತಿ ಗುರುಪ್ರಸಾದ್ ಅವರಿಗೆ 2017ರ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಕನ್ನಡಸಂಘದ 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ ನೂತನ ಕೃತಿಗಳ ಲೋಕಾರ್ಪಣೆ ಮತ್ತು ಏಕವ್ಯಕ್ತಿ ಪ್ರದರ್ಶನ ಕಾರ್ಯಕ್ರಮವು ರವಿವಾರ ನಡೆಯಿತು.
ಹಿರಿಯ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ನೂತನ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಓದುವಿಕೆಯಿಂದ ಹುಟ್ಟಿಕೊಳ್ಳುವ ಅರಿವು ನಮ್ಮ ಬದುಕನ್ನು ವಿಸ್ತಾರಗೊಳಿಸುತ್ತದೆ. ನಮ್ಮ ಇಂದಿನ ಮನಸ್ಥಿತಿ ಮತ್ತು ಪರಿಸ್ಥಿತಿಗೆ ಓದಿನ ಮತ್ತು ಸಾಂಸ್ಕೃತಿಕ ಚಿಂತನೆಯ ಕೊರತೆಯೇ ಕಾರಣವಾಗಿದ್ದು ಸಾಂಸ್ಕೃತಿಕ ಬೀಜ ಬಿತ್ತನೆಯ ಮೂಲಕ ಮಾತ್ರ ನಾಡು ಬೆಳೆಸಲು ಸಾಧ್ಯವೇ ಹೊರತು ರಾಜಕೀಯ ಚಿಂತನೆಯಿಂದಲ್ಲ. ಮಾತೃಭಾಷೆಯ ಮೂಲಕ ಬರೇ ಬದುಕು ಕಟ್ಟಿಕೊಳ್ಳುವುದು ಮಾತ್ರವಲ್ಲ ಅಂತರಂಗದ ವಿಮರ್ಶೆ ಮಾಡಿಕೊಳ್ಳುವುದೂ ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಮುದ್ದಣ ಸಾಹಿತ್ಯೋತ್ಸವವನ್ನು ಹಿರಿಯ ರಂಗ ಕರ್ಮಿ ಬೆಂಗಳೂರಿನ ಶ್ರೀಪತಿ ಮಂಜನಬೈಲು ಉದ್ಘಾಟಿಸಿ ವರಕವಿ ಮುದ್ದಣ ತನ್ನ ಕಾವ್ಯಪ್ರತಿಭೆಯನ್ನು ಸುಪ್ತವಾಗಿರಿಸಿಕೊಳ್ಳಲು ಕೀಳರಿಮೆಯೇ ಮೊದಲಾದ ಸಾಧ್ಯತೆಗಳಿದ್ದು ಈ ಕುರಿತ ಸಂಶೋಧನೆ ಸಾರಸ್ವತ ಲೋಕಕ್ಕೆ ಉಪಯುಕ್ತವಾಗಬಲ್ಲದು ಎಂದರು.
ಮುದ್ದಣ ಕಾವ್ಯ ಪ್ರಶಸ್ತಿ: ವರಕವಿ ನಂದಳಿಕೆಯ ಮುದ್ದಣನ ಹೆಸರಿನಲ್ಲಿರುವ ಕನ್ನಡ ಸಂಘವು 1979ರಲ್ಲಿ ಪ್ರಾರಂಭಿಸಿರುವ ಮುದ್ದಣ ಕಾವ್ಯ ಪ್ರಶಸ್ತಿಯ 2017ರ ಸಾಲಿನ ಪ್ರಶಸ್ತಿಯನ್ನು ಕವಯತ್ರಿ ಜ್ಯೋತಿ ಗುರು ಪ್ರಸಾದ್ ಕಾರ್ಕಳ ಅವರ 'ಜಟಾಯು ಪಕ್ಷಿಗೆ ಶ್ರದ್ಧಾಂಜಲಿ' ಎನ್ನುವ ಕವನ ಸಂಗ್ರಹದ ಹಸ್ತಪ್ರತಿಯು ಪಡೆದುಕೊಂಡಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು ತಾಮ್ರಪತ್ರ, ಹತ್ತುಸಾವಿರ ಗೌರವ ನಗದು ಸಹಿತ ಪ್ರಶಸ್ತಿ ಪ್ರದಾನ ಮಾಡಿದರು.
ಮಾನವನ ಜೀವನಕ್ಕೆ ಮುದ್ದಣನ ಕಾವ್ಯಗಳು ಸಾಮಾಜಿಕ ಮೌಲ್ಯಗಳ ಮೂಲಕ ದಾರಿ ತೋರಿವೆ ಎಂದು ಜ್ಯೋತಿ ಗುರುಪ್ರಸಾದ್ ತಮ್ಮ ಸಂತಸ ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ರಾಜಕೀಯ ಮುತ್ಸದ್ಧಿ ಮತ್ತು ಸಂಸ್ಕೃತಿ ಚಿಂತಕರು ಧಾರವಾಡದ ಚಂದ್ರಕಾಂತ ಬೆಲ್ಲದ್ ಮಾತನಾಡಿ ಆಡಳಿತ ವರ್ಗ ಮತ್ತು ಸಮಾಜಕ್ಕೆ ಮಾರ್ಗದರ್ಶಿಯಾದ ಸಾಹಿತ್ಯ ಇಂದಿನ ಅಗತ್ಯವಾಗಿದೆ. ಸಾಮಾಜಿಕ ಚಿಂತನೆಯ, ಜನತೆಯ ಧ್ವನಿಯಾಗಿ ಪ್ರಶ್ನಿಸುವ ಸಾಹಿತ್ಯ ಬೆಳೆದಾಗ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದರು.
ನಾಡಿಗೆ ನಮಸ್ಕಾರ: ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರನ್ನು ಪರಿಚಯಿಸುವ ಕೃತಿ ಮಾಲೆ 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯಲ್ಲಿ ಈಗಾಗಲೇ 219 ಕೃತಿಗಳು ಪ್ರಕಟಗೊಂಡಿದ್ದು ಸಾಹಿತ್ಯೋತ್ಸವದಲ್ಲಿ 10 ನೂತನ ಕೃತಿಗಳ ಲೋಕಾರ್ಪಣೆ ನಡೆಯಿತು. ಯುವ ಬರಹಗಾರ, ಪತ್ರಕರ್ತ ದೀವಿತ್ ಶ್ರೀಧರ್ ಕೋಟ್ಯಾನ್ ಪೆರಾಡಿ ಅವರು ಮಂಟಪ ಪ್ರಭಾಕರ ಉಪಾಧ್ಯರ ಬಗ್ಗೆ, ಡಾ. ರಾಮದಾಸ ಪಯ ಮಣಿಪಾಲ (ಲೇಖಕ: ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ) ,ಡಾ. ಎ.ವಿ.ಬಾಳಿಗ (ಲೇ: ಡಾ.ಪಿ.ವಿ.ಭಂಡಾರಿ) ಸೂರ್ಯನಾರಾಯಣ ಚಡಗ (ಲೇ: ಶಾರದಾ ಭಟ್) ಪದ್ಮಾ ಶೆಣೈ (ಲೇ: ನಳಿನಾಕ್ಷಿ ಕೆ.) ಪುತ್ತೂರು ನಾಡಹಬ್ಬ ಸಮಿತಿ (ಲೇ: ಪ್ರೊ. ಹರಿನಾರಾಯಣ ಮಾಡಾವು) ಪಾತಾಳ ವೆಂಕಟ್ರಮಣ ಭಟ್ (ಲೇ: ನಾ.ಕಾರಂತ ಪೆರಾಜೆ) ಡಾ. ಪಾದೆಕಲ್ಲು ವಿಷ್ಣುಭಟ್ (ಲೇ: ಡಾ. ಎಸ್.ಆರ್.ಅರುಣಕುಮಾರ್) ಎಸ್.ಆರ್.ಹೆಗ್ಡೆ (ಲೇ: ಇಂದಿರಾ ಹೆಗ್ಡೆ) ಎಮ್.ಬಿ.ಕುಕ್ಯಾನ್ (ಲೇ: ಶ್ರೀ ಈಶ್ವರ ಅಲೆವೂರು) ಕೃತಿಗಳು ಅನಾವರಣಗೊಂಡವು. ಇದೇ ವೇಳೆ ಗ್ರಂಥ ಮಾಲೆಯ ಸಂಪಾದಕ ಡಾ. ಬಿ.ಜನಾರ್ಧನ ಭಟ್ ಅವರ ಬಹುತ್ವ: ಅಂತರಂಗ ಮತ್ತು ಬಹಿರಂಗ, ತೋರುಗಂಬ, ಪದ್ಯಾಣ ಗೋಪಾಲಕೃಷ್ಣ ಅವರ 'ಅನುಭವ ಅನುಭಾವಗಳ ನಡುವೆ', ಪ್ರೊ. ಸಿದ್ದು ಯಾಪಲಪರವಿ ಮತ್ತು ಕಾವ್ಯಶ್ರೀ ಅವರ ಕೃತಿ 'ಪಿಸುಮಾತುಗಳ ಜುಗಲ್' ಕೃತಿಗಳ ಲೋಕಾರ್ಪಣೆ ನಡೆಯಿತು. ಕೃತಿಕಾರರು, ಸಾಧಕರು, ಪ್ರಾಯೋಜಕರನ್ನು ಗೌರವಿಸಲಾಯಿತು.
ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ನಯನ ಕುಮಾರ್ ಜೈನ್ ವಂದಿಸಿ ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರೂಪಿದರು. ಅಪರಾಹ್ನ ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರ ನಿರ್ದೇಶನದಲ್ಲಿ 'ಯಕ್ಷ ಭರತ ಸಂಗಮ' ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರಿಂದ 'ಪಾಂಚಾಲಿ' ಏಕವ್ಯಕ್ತಿ ಪ್ರದರ್ಶನ ನಡೆಯಿತು.







