ಟೈಲರ್ಸ್‍ಗಳಿಗೆ ಭವಿಷ್ಯನಿಧಿ: ನಿರ್ಲಕ್ಷ್ಯ ತೋರುತ್ತಿರುವ ಸರಕಾರಗಳು; ಕೆ. ಎಸ್. ಆನಂದ್

ಮೂಡುಬಿದಿರೆ, ಫೆ.18 : ಜನರ ಮಾನ ಮುಚ್ಚುವ ವಸ್ತ್ರಗಳನ್ನು ತಯಾರಿಸುವವರು ಟೈಲರ್ಸ್‍ಗಳು. ರಾಜಕೀಯ ಪ್ರವೇಶ ಮಾಡಿ `ಒಮ್ಮೆ ಶಾಸಕ, ಸಂಸದರಾದರೆ ಅವರು ಜೀವನಪರ್ಯಂತ ಪೆನ್ಶನ್ ಪಡೆಯುತ್ತಾರೆ. ಆದರೆ ಟೈಲರ್ಸ್‍ಗಳಿಗೆ ಭವಿಷ್ಯನಿಧಿ ಸೌಲಭ್ಯ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿವೆ. 19 ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದೆಯಾದರೂ ನ್ಯಾಯ ಸಿಕ್ಕಿಲ್ಲ. ಟೈಲರ್ ವೃತ್ತಿಬಾಂಧವರು ಈ ಬಗ್ಗೆ ತೀವ್ರ ಹೋರಾಟ ಮಾಡಬೇಕಾಗಿದೆ' ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ರಾಜ್ಯಾಧ್ಯಕ್ಷ ಕೆ. ಎಸ್. ಆನಂದ್ ಅವರು ಹೇಳಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮುಲ್ಕಿ ಮೂಡಬಿದಿರೆ ಕ್ಷೇತ್ರ ಸಮಿತಿ ವತಿಯಿಂದ ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಿಜಾರು, ರೆಡ್‍ಕ್ರಾಸ್ ಸಂಸ್ಥೆ ಮತ್ತು ಮಂಗಳೂರು ವೆನ್‍ಲಾಕ್ ಆಸ್ಪತ್ರೆಯ ಸಂಚಾರಿ ನೇತ್ರ ಘಟಕ ಇವುಗಳ ಸಹಯೋಗದೊಂದಿಗೆ ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ರವಿವಾರ ಏರ್ಪಡಿಸಲಾಗಿದ್ದ ನೇತ್ರದಾನ ರಕ್ತದಾನ, ಉಚಿತ ಆರೋಗ್ಯ ಆರೋಗ್ಯ, ಉಚಿತ ಕಣ್ಣು ಪರೀಕ್ಷೆ ಹಾಗೂ ಉಚಿತ ಕನ್ನಡಕ ವಿತರಣೆ, ಆರೋಗ್ಯ ಕಾರ್ಡ್ ವಿತರಣ ಕಾರ್ಯಕ್ರಮ, ಸದಸ್ಯತನ ನೋಂದಾವಣೆ ಮತ್ತು ನವೀಕರಣ ಅಭಿಯಾನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಟೈಲರ್‍ಗಳಿದ್ದಾರೆ. ಆದರೆ ನಿವೃತ್ತಿ ವೇತನ ಯೋಜನೆಯಡಿ ನೋಂದಾಯಿಸಿಕೊಂಡವರು ಕೇವಲ 11 ಸಾವಿರ. ದಯವಿಟ್ಟು ಎಲ್ಲ ದರ್ಜಿಗಳೂ ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಅವರು ವಿನಂತಿಸಿದರು.
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮಂಗಳೂರು ಲೇಡಿ ಗೋಶನ್ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಎಡ್ವರ್ಡ್ ವಾಸ್ ರಕ್ತದಾನದ ಮಹತ್ವದ ಬಗ್ಗೆ , ವೆನ್‍ಲಾಕ್ ಆಸ್ಪತ್ರೆಯ ನೇತ್ರದಾನ ಘಟಕದ ಡಾ. ಅನಿಲ್ ರಾಮಾನುಜಂ ನೇತ್ರದಾನದ ಬಗ್ಗೆ ವಿವರಿಸಿದರು. ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜು ಉಪಪ್ರಾಂಶುಪಾಲ ಡಾ. ರೋಶನ್ ಪಿಂಟೋ , ಕೆ.ಎಸ್.ಟಿ.ಎ. ದ.ಕ. ಜಿಲ್ಲಾಧ್ಯಕ್ಷ ಪ್ರಜ್ವಲ್‍ಕುಮಾರ್ ಮುಖ್ಯಅತಿಥಿಗಳಾಗಿದ್ದರು. ವಿವಿಧ ವಲಯಗಳ ಅಧ್ಯಕ್ಷರಾದ ಚಂದ್ರಾವತಿ (ಮುಲ್ಕಿ), ಸುರೇಶ್ ಎಸ್. (ಹಳೆಯಂಗಡಿ), , ಹರೀಶ್ ಜಿ. ಪದ್ಮಶಾಲಿ (ಕಿನ್ನಿಗೋಳಿ ), ಮೂಡುಬಿದಿರೆ ವಲಯದ ಉಪಾಧ್ಯಕ್ಷ ಬಾಲಕೃಷ್ಣ ಅಂಚನ್, ಕ್ಷೇತ್ರ ಕಾರ್ಯದರ್ಶಿ ಕೇಶವ ಕಾಮತ್, ಕೋಶಾ„ಕಾರಿ ಜಯನಂದಿನಿ ಉಪಸ್ಥಿತರಿದ್ದರು.
ಕೆ.ಎಸ್.ಟಿ.ಎ. ಮುಲ್ಕಿ ಮೂಡಬಿದಿರೆ ಪ್ರಭಾಕರ ಶೆಟ್ಟಿಗಾರ್ ಸ್ವಾಗತಿಸಿದರು. ಬಾಲಕೃಷ್ಣ ಅಂಚನ್ ವಂದಿಸಿದರು. ಜಿಲ್ಲಾ ಕೋಶಾಧಿಕಾರಿ ಉದಯ ಅಮೀನ್ ಮಟ್ಟು ನಿರೂಪಿಸಿದರು.
ಸುಮಾರು 500 ಮಂದಿ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದು 25 ಮಂದಿ ರಕ್ತದಾನ ಮಾಡಿದರು, 36 ಮಂದಿ ನೇತ್ರದಾನ ಘೋಷಿಸಿದರು. 167 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.







