ಮುಹಮ್ಮದ್ ನಲಪಾಡ್ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇನೆ: ಪ್ರಕಾಶ್ ರೈ

ಬೆಂಗಳೂರು, ಫೆ.18: ಪ್ರತಿಯೊಬ್ಬರೂ ಯಾರನ್ನಾದರೂ ಹೊಗಳುವ ಮೊದಲು ಯೋಚಿಸಬೇಕು ಹಾಗೂ ಹೊಗಳುವಾಗ ಎಚ್ಚರಿಕೆಯಿಂದಿರಬೇಕು ಎಂಬ ಸತ್ಯ ನನಗೆ ಇಂದು ಅರ್ಥವಾಗಿದೆ ಎಂದು ಬಹುಭಾಷಾ ನಟ ಪ್ರಕಾರ್ ರೈ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮುಹಮ್ಮದ್ ನಲಪಾಡ್ ಹ್ಯಾರೀಸ್ ಅನ್ನು ಪ್ರಕಾಶ್ ರೈ ಹಾಡಿ ಹೊಗಳಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬೇರೆಯವರನ್ನು ಹೊಗಳುವ ಸಂದರ್ಭದಲ್ಲಿ ತುಂಬಾ ಹುಷಾರಾಗಿರಬೇಕು ಎಂಬ ಸತ್ಯ ನನಗಿಂದು ಅರ್ಥವಾಗಿದೆ. ಅಂದು ಒಳ್ಳೆಯ ಕೆಲಸ ಮಾಡಿದ್ದರಿಂದ ಹ್ಯಾರೀಸ್‌ನ ಹೊಗಳಿದ್ದೆ. ಆದರೆ, ಇಂದು ಇನ್ನೊಬ್ಬರ ಮೇಲೆ ಅವರು ಹಲ್ಲೆ ಮಾಡಿರುವುದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ತಪ್ಪು ಯಾರು ಮಾಡಿದರೂ ತಪ್ಪೇ. ಮುಖ್ಯಮಂತ್ರಿಯಾಗಲಿ, ಪ್ರಧಾನಿಯಾಗಲಿ, ಸಂಸದ, ಸಚಿವ, ಶಾಸಕ ಹಾಗೂ ಅವರ ಮಕ್ಕಳಾಗಲಿ. ಎಲ್ಲವೂ ಪ್ರಶ್ನಾರ್ಥಕವಾಗಿರುತ್ತವೆ. ನನ್ನನ್ನು ಯಾರೂ ಕೇಳುವವರಿಲ್ಲ ಎಂದು ಗಲಾಟೆ ಮಾಡುವುದು, ಹಲ್ಲೆ ನಡೆಸುವುದು, ಬೆದರಿಕೆ ಹಾಕುವುದು ದುರಹಂಕಾರದ ಪರಮಾವಧಿ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.





