ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿ ರಾಷ್ಟ್ರಧ್ವಜ ಹಾರಿಸಿದ ಹಿಂದೂ ಏಕ್ತಾ ಮಂಚ್
ಬಿಜೆಪಿ ನಾಯಕನದ್ದೇ ನೇತೃತ್ವ

ಶ್ರೀನಗರ, ಫೆ.18: ಎಂಟು ವರ್ಷ ಪ್ರಾಯದ ಅಲೆಮಾರಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ವಿಶೇಷ ಪೊಲೀಸ್ ಅಧಿಕಾರಿಯ ಬಿಡುಗಡೆಗೆ ಆಗ್ರಹಿಸಿ ಹಿಂದೂ ಏಕ್ತಾ ಮಂಚ್ ಇತ್ತೀಚೆಗೆ ಜಮ್ಮುವಿನ ಕತುವಾ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯ ನೇತೃತ್ವವನ್ನು ಆಡಳಿತಾರೂಡ ಬಿಜೆಪಿಯ ರಾಜ್ಯ ಕಾರ್ಯದರ್ಶಿ ವಹಿಸಿದ್ದರು.
ಅದೂ ಸಾಲದೆಂಬತೆ, ಆರೋಪಿ ದೀಪಕ್ ಕಜುರಿಯಾನನ್ನು ಬೆಂಬಲಿಸಿ ಫೆಬ್ರವರಿ 15ರಂದು ನಗರದ ಬೀದಿಗಳಲ್ಲಿ ನಡೆಸಿದ ರ್ಯಾಲಿಯ ವೇಳೆ ಪ್ರತಿಭಟನಾಕಾರರು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡಿರುವುದು ವಿಡಿಯೊ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಣಿವೆ ರಾಜ್ಯವನ್ನು ತಲ್ಲಣಗೊಳಿಸಿದ ಎಂಟರ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯ ಕ್ರೈಂ ಬ್ರಾಂಚ್ ಪೊಲೀಸರು ಫೆಬ್ರವರಿ 10ರಂದು ಕತುವಾದ ಹಿರಾನಗರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ 28ರ ಹರೆಯದ ಕಜುರಿಯಾನನ್ನು ಬಂಧಿಸಿದ್ದರು.
ಹತ್ಯೆಗೀಡಾದ ಬಾಲಕಿ ಆಸಿಯ ಗುಜ್ಜರ್ ಸಮುದಾಯಕ್ಕೆ ಸೇರಿದವಳಾಗಿದ್ದು, ಜನವರಿ 10ರಂದು ಕಸನ ಗ್ರಾಮದಲ್ಲಿರುವ ತನ್ನ ಮನೆಯ ಕುದುರೆಯನ್ನು ಸಮೀಪದ ಬಾವಿಯ ಸಮೀಪ ಕೊಂಡೊಯ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದಳು. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದಂತೆಯೇ ಒಂದು ವಾರದ ನಂತರ ಸ್ಥಳೀಯರು ಆಸಿಯಾಳ ಮೃತದೇಹವನ್ನು ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಮಾಡಿದ್ದರು. ತನಿಖೆಯ ವೇಳೆ ಈ ಅಪರಾಧವನ್ನು ಕಜುರಿಯಾ ನಡೆಸಿರುವ ಬಗ್ಗೆ ಪೊಲೀಸರಿಗೆ ಸಾಕ್ಷಿಗಳು ದೊರಕಿದ್ದವು.
ಆರೋಪಿಯ ಬಿಡುಗಡೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜವನ್ನು ಬಳಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಇದು ರಾಷ್ಟ್ರಧ್ವಜವನ್ನು ಅವಮಾನ ಮಾಡಿದ್ದಕ್ಕೆ ಸಮ ಎಂದು ವ್ಯಾಖ್ಯಾನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಿಜಯ್ ಶರ್ಮಾ ಪ್ರಕಾರ, ಜನರನ್ನು ಪೊಲೀಸ್ ದೌರ್ಜನ್ಯದಿಂದ ರಕ್ಷಿಸುವ ಸಲುವಾಗಿ ಕಳೆದ ತಿಂಗಳು ಹಿಂದೂ ಏಕ್ತಾ ಮಂಚನ್ನು ಸ್ಥಾಪಿಸಲಾಯಿತು. ಈ ಸಂಘಟನೆಯ ಹಿರನಗರ್ ವಿಭಾಗದ ನೇತೃತ್ವವನ್ನು ತಾನು ವಹಿಸಿರುವುದಾಗಿ ಶರ್ಮಾ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿ ಕಜುರಿಯಾ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಹಾಗಾಗಿ ಅವರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ 5,000ಕ್ಕೂ ಅಧಿಕ ಜನರು ಪಾಲ್ಗೊಂಡಿರುವುದಾಗಿ ಶರ್ಮಾ ಹೇಳಿಕೊಂಡಿದ್ದಾರೆ.
ಘಟನೆಯ ತನಿಖೆ ನಡೆಸಿದ ಪೊಲೀಸರು ಮೊದಲಿಗೆ ಅಪ್ರಾಪ್ತ ಬಾಲಕನೊಬ್ಬನನ್ನು ಬಂಧಿಸಿದ್ದರು. ಆದರೆ ಈ ಕುರಿತ ತನಿಖೆಯು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರೈ ಬ್ರಾಂಚ್‌ಗೆ ಒಪ್ಪಿಸಲಾಯಿತು. ಆನಂತರ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು.
ವಿಶೇಷವೆಂದರೆ, ನಾಪತ್ತೆಯಾದ ಬಾಲಕಿಯ ಹುಡುಕಾಟ ನಡೆಸಿದ ಪೊಲೀಸ್ ತಂಡದಲ್ಲಿ ಕಜುರಿಯಾ ಕೂಡಾ ಇದ್ದ. ಆಸಿಯಾಳ ಮೃತದೇಹವನ್ನು ಆಕೆಯ ಹೆತ್ತವರಿಗೆ ಹಸ್ತಾಂತರಿಸುವ ವೇಳೆಯೂ ಆತ ಹಾಜರಿದ್ದ. ಆಸಿಯಾ ಕುಟುಂಬವು ಆರಂಭದಿಂದಲೂ ಕಜುರಿಯಾನನ್ನು ಬಂಧಿಸುವಂತೆ ಆಗ್ರಹಿಸಿತ್ತು ಮತ್ತು ಆತ ತಮ್ಮನ್ನು ಮತ್ತು ಗುಜ್ಜರ್ ಸಮುದಾಯದ ಇತರರನ್ನು ಪೀಡಿಸುತ್ತಿರುವುದಾಗಿ ಆರೋಪಿಸಿತ್ತು.







