ಅಧಿಕಾರ ಜನರ ಸೇವೆ ಮಾಡುವ ಸಾಧನ: ಸಿ.ಎಂ ಸಿದ್ದರಾಮಯ್ಯ
ಮಸ್ಕಿ ನೂತನ ತಾಲೂಕು ಉದ್ಘಾಟನೆ

ರಾಯಚೂರು, ಫೆ.18: ಅಧಿಕಾರವೆಂಬುದು ಅನುಭವಿಸುವುದಕ್ಕೆ ಇರುವುದು ಎಂದು ಭಾವಿಸದೆ ಜನರ ಸೇವೆ ಮಾಡುವ ಸಾಧನವೆಂದು ತಿಳಿದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರವಿವಾರ ಮಸ್ಕಿ ಪೊಲೀಸ್ ಠಾಣೆಯ ಸಮೀಪದಲ್ಲಿ ಏರ್ಪಡಿಸಿದ್ದ ಮಸ್ಕಿ ತಾಲೂಕು ಉದ್ಘಾಟನೆ, 2097 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜ್ಞಾಪೂರ್ವಕವಾಗಿ ನಮ್ಮ ಸರಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಅದಮ್ಯ ವಿಶ್ವಾಸದ ಮೇಲೆ ಪೂರ್ಣಪ್ರಮಾಣದ ಬಜೆಟ್ ತಯಾರಿಸಿ ಮಂಡಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಜನರೆ ನಮ್ಮ ಪ್ರಭುಗಳು. ತಮಗೆ ಕೊಟ್ಟ ಎಲ್ಲ ಭರವಸೆಗಳನ್ನು 5 ವರ್ಷದ ಅವಧಿಯಲ್ಲಿ ಈಡೇರಿಸಿದ್ದೇನೆ ಎಂದು ಅವರು ಹೇಳಿದರು.
ವಿರೋಧ ಪಕ್ಷಗಳು ಹೊರಗಡೆ ಅನಗತ್ಯ ಟೀಕಿಸುವ ಬದಲು ಅಭಿವೃದ್ಧಿ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ಬರಲಿ ಎಂದು ಸವಾಲೆಸೆದ ಅವರು, ನನ್ನ ಆಹ್ವಾನ ಎದುರಿಸಲಿಕ್ಕೆ ಅವರಿಗೆ ಧಮ್ಮಿಲ್ಲ. ಜನರಿಗೆ ಅವರ ಬಂಡವಾಳ ಗೊತ್ತಾಗಿದೆ. ಅನೇಕ ಸಂಸ್ಥೆಗಳು ಸಮೀಕ್ಷೆ ಮಾಡಿ ವರದಿ ನೀಡಿ ನಮ್ಮ ಸರಕಾರವೆ ಅಧಿಕಾರಕ್ಕೆ ಬರುತ್ತದೆ ಅಂತ ಹೇಳಿದ ಮೇಲೆ ಆಧಾರ ರಹಿತ, ಬುಡವಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಟೀಕಿಸಿದರು.
ಕಳೆದ 5 ವರ್ಷಗಳಲ್ಲಿ ಯಾವುದೇ ಹಗರಣವಿಲ್ಲದೇ, ಭ್ರಷ್ಟಾಚಾರವಿಲ್ಲದೇ ಸ್ವಚ್ಛ ಆಡಳಿತ ನಡೆಸಿದ ಸರಕಾರ ನಮ್ಮದು, ಈ ರಾಜ್ಯ ಉಳಿಯಬೇಕು ಮತ್ತು ರಾಜ್ಯ ಅಭಿವೃದ್ಧಿಯಾಗಬೇಕೆಂದರೇ ನಮ್ಮ ಸರಕಾರವೇ ಅಧಿಕಾರಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಎಸ್ಸಿಪಿ/ಟಿಎಸ್ಪಿಯೋಜನೆ ಅಡಿ 88 ಸಾವಿರ ಕೋಟಿ ರೂ.ಗಳನ್ನು ನಮ್ಮ ಸರಕಾರ ಇದುವರೆಗೆ ಖರ್ಚು ಮಾಡಿದೆ. ಗುತ್ತಿಗೆಯಲ್ಲಿ 1 ಕೋಟಿ ರೂ.ವರೆಗೆ ಎಸ್ಸಿ/ಎಸ್ಟಿ ಜನರಿಗೆ ಕಾಮಗಾರಿ ಒದಗಿಸಲು ಮೀಸಲಾತಿ ಜಾರಿಗೆ ತಂದಿದ್ದೇವೆ. ವಾಸಿಸುವವನೆ ಮನೆಯೊಡೆಯ ಎಂಬ ಐತಿಹಾಸಿಕ ಕಾನೂನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಆರೋಗ್ಯ ಯೋಜನೆ ಜಾರಿಗೆ ತರುವುದರ ಮೂಲಕ 1.43ಲಕ್ಷ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲು ತೀರ್ಮಾನಿಸಿರುವುದು ನಮ್ಮ ಸರಕಾರ. ಇದು ಇಡೀ ದೇಶದಲ್ಲಿಯೇ ಮೊದಲು ಎಂದು ಬಣ್ಣಿಸಿದ ಅವರು, ಸರಕಾರಿ,ಖಾಸಗಿ ಶಾಲೆಯಲ್ಲಿ ಓದುತ್ತಿರುವ ಹೆಣ್ಮಕ್ಕಳಿಗೆ ಒಂದು ರೂ.ಕೂಡ ಪಾವತಿಸದೆ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಇದನ್ನು ಎಪ್ರಿಲ್ 1ರಿಂದ ಜಾರಿಗೆ ತರಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಕೂಡ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ನೀರಾವರಿಗಾಗಿ ಪ್ರತಿ ವರ್ಷ 10 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ಆದರೆ ಒಣಬೇಸಾಯಕ್ಕೆ ಯಾವುದೇ ಖರ್ಚು ಮಾಡದಿರುವುದನ್ನು ಗಮನದಲ್ಲಿಟ್ಟುಕೊಂಡು ಒಣಭೂಮಿ ಬೇಸಾಯ ಮಾಡುವ 70 ಲಕ್ಷ ರೈತರಿಗೆ 1 ಹೆಕ್ಟೇರ್‌ಗೆ 5 ರಿಂದ 10 ಸಾವಿರ ರೂ.ಗಳ ಹಣ ನೇರವಾಗಿ ಆ ರೈತರ ಅಕೌಂಟ್‌ಗೆ ವರ್ಗಾವಣೆ ಮಾಡಲಿದ್ದು, ಇದಕ್ಕೆ ‘ರೈತ ಬೆಳಕು’ ಎಂಬ ಹೆಸರಿಡಲಾಗಿದೆ. 3,500 ಕೋಟಿ ರೂ. ಇದಕ್ಕಾಗಿ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಂದವಾಡಗಿ ಏತನೀರಾವರಿ ಯೋಜನೆ ಈಗಾಗಲೇ ಶುರುಮಾಡಿದ್ದೇವೆ.ಇದಕ್ಕಾಗಿ 271ಕೋಟಿ ರೂ. ಖರ್ಚು ಮಾಡಿದ್ದೇವೆ. ಅನೇಕ ರಂಗಗಳಲ್ಲಿ ನಾವು 1ನೇ ಸ್ಥಾನದಲ್ಲಿದ್ದು, ಇನ್ನೂ ಉಳಿದ ಸ್ಥಾನಗಳಲ್ಲಿ 1ನೇ ಸ್ಥಾನಕ್ಕೇರಿಸುವ ಮೂಲಕ ನವ ಕರ್ನಾಟಕ ನಿರ್ಮಾಣ ಮಾಡಬೇಕಿದೆ. ಆದುದರಿಂದ ಜನ ನಮ್ಮನ್ನು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಂ.ರೇವಣ್ಣ, ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಸಂಸದ ಬಿ.ವಿ.ನಾಯಕ್, ಮಾನ್ವಿ ಶಾಸಕ ಹಂಪಯ್ಯ ನಾಯಕ, ವಿಧಾನಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜ್, ಶರಣಪ್ಪ ಮಟ್ಟೂರ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಐಜಿಪಿ ಶಿವಪ್ರಕಾಶ, ಜಿಪಂ ಸಿಇಒ ಅಭಿರಾಮ್ ಶಂಕರ್, ಜಿಲ್ಲಾಧಿಕಾರಿ ಗೌತಮ್ ಬಗಾದಿ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.







