ರಾಜಸ್ಥಾನದ ಬೀವರ್ ಸಿಲಿಂಡರ್ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 18ಕ್ಕೆ

ಜೈಪುರ,ಫೆ.18: ಅಜ್ಮೀರ್ ಜಿಲ್ಲೆಯ ಬೀವರ್ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮದುವೆ ಸಮಾರಂಭವೊಂದರಲ್ಲಿ ಅಡಿಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಅವಶೇಷಗಳಡಿ ಇನ್ನೂ ಒಂಭತ್ತು ಶವಗಳು ರವಿವಾರ ಪತ್ತೆಯಾಗಿದ್ದು, ಇದರೊಂದಿಗೆ ಸಾವುಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಗಾಯಗೊಂಡಿದ್ದ 18 ಜನರ ಪೈಕಿ ಆರು ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಐವರನ್ನು ಅಜ್ಮೀರ್‌ನಿಂದ ಜೈಪುರದ ಕೆಎಲ್‌ಎನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಅವಶೇಷಗಳಡಿ ಇನ್ನೂ ಇಬ್ಬರು ಸಿಕ್ಕಿಹಾಕಿಕೊಂಡಿದ್ದಾರೆಂದು ಶಂಕಿಸಲಾಗಿದೆ ಎಂದು ಅಜ್ಮೀರ್ ಜಿಲ್ಲಾಧಿಕಾರಿ ಗೌರವ ಗೋಯಲ್ ತಿಳಿಸಿದರು. ದುರಂತದ ಸ್ಥಳದಲ್ಲಿ ಸೇನೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಯ ಜಂಟಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದರು.
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಶನಿವಾರ ಸ್ಫೋಟದಲ್ಲಿ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಆರ್ಥಿಕ ನೆರವನ್ನು ಪ್ರಕಟಿಸಿದ್ದಾರೆ. ಮೃತರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರವಾಗಿ ತಲಾ ಒಂದು ಲ.ರೂ.ಗಳನ್ನು ಶ್ರೀ ಸಿಮೆಂಟ್ ಕಂಪನಿಯು ನೀಡಿದೆ.







