ಅನಧಿಕೃತ ಬ್ಯಾನರ್ ಅಳವಡಿಕೆ ವಿರುದ್ಧ 695 ಪ್ರಕರಣಗಳು ದಾಖಲು: ಹೈಕೋರ್ಟ್‌ಗೆ ರಾಜ್ಯ ಸರಕಾರ ಮಾಹಿತಿ
ಬೆಂಗಳೂರು, ಫೆ.18: ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆ 1981ರ ಅಡಿಯಲ್ಲಿ ನಗರದಲ್ಲಿ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಿರುವವರ ವಿರುದ್ಧ 2014 ರಿಂದ 2018ರ ಜನವರಿ ಅಂತ್ಯದವರೆಗೆ ಒಟ್ಟು 695 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಅಕ್ರಮ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ನಗರದ ಮಾಯಿಗೆಗೌಡ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಪೀಠಕ್ಕೆ, ಸಿಸಿಆರ್‌ಬಿ ಸಹಾಯಕ ಪೊಲೀಸ್ ಆಯುಕ್ತ ಜಿ.ಯು. ಸೋಮೇಗೌಡ ಅವರ ಪ್ರಮಾಣಪತ್ರವನ್ನು ಸರಕಾರಿ ವಕೀಲರು ಸಲ್ಲಿಸಿದರು.
2014ರಿಂದ ಇಲ್ಲಿಯವರೆಗೆ ಬಿಬಿಎಂಪಿಯಿಂದ 746 ದೂರುಗಳು ಬಂದಿದ್ದು, ಈ ಪೈಕಿ 15 ಸುಳ್ಳು ದೂರುಗಳಾಗಿದ್ದರೆ, 36 ದೂರುಗಳು ವರ್ಗಾವಣೆಗೊಂಡಿವೆ. ಇವನ್ನು ಹೊರತು ಪಡಿಸಿ 695 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ 141 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗಿದ್ದು, 20 ಪ್ರಕರಣಗಳಲ್ಲಿ ಆರೋಪ ಕೈಬಿಡಲಾಗಿದೆ. 192 ಪ್ರಕರಣಗಳು ತನಿಖಾ ಹಂತದಲ್ಲಿ ಹಾಗೂ 315 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಇನ್ನೂ 20 ಪ್ರಕರಣಗಳನ್ನು ಪತ್ತೆ ಹಚ್ಚಬೇಕಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಈ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿತು.
ಪ್ರಕರಣವೇನು: ಬಿಬಿಎಂಪಿ ವ್ಯಾಪ್ತಿಯ 800 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆಗೆ 1982ರಲ್ಲೇ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ಈವರೆಗೆ ನಿಯಮ ರೂಪಿಸಲಾಗಿಲ್ಲ. ಬಿಬಿಎಂಪಿ ಸಹ ಯಾವುದೇ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಅಕ್ರಮ ಬ್ಯಾನರ್, ಹೋರ್ಡಿಂಗ್ಸ್ ತೆರವಿಗೆ ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಕಳೆದ ಬಾರಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅಕ್ರಮವಾಗಿ ಅಳವಡಿಸಲಾಗಿರುವ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವಿಗೆ ಕಾಯ್ದೆಯ ಅಡಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿತ್ತು.







