ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವತಯಾರಿಗೆ ಕಾರ್ಯಾಗಾರ
ಉಡುಪಿ, ಫೆ.18:ಹಿರಿಡಯಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಕೋಶ ಮತ್ತು ಐಕ್ಯುಎಸಿ ಕೋಶಗಳ ಜಂಟಿ ಸಹಯೋಗ ದಲ್ಲಿ ಸ್ಪರ್ಧಾತ್ಮಕ ಮತ್ತು ವೃತ್ತಿಪರ ಪರೀಕ್ಷೆಗಳನ್ನು ಎದುರಿಸಲು ಪೂರ್ವತಯಾರಿ ಬಗ್ಗೆ ಒಂದು ದಿನದ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ.ಸಂಧ್ಯಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಆರ್. ರಾಯ್ಕರ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಪೈಪೋಟಿ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನೆದುರಿಸುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು, ಮತ್ತು ಉದ್ಯೋಗ ಮಾಹಿತಿ ಕೋಶದ ಸಂಚಾಲಕ ಪ್ರೊ.ದಿನೇಶ್ ಎಂ. ಪ್ರಾಸ್ತಾವಿಕ ಮಾತುಗಳಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ, ಐಕ್ಯುಎಸಿ ಕೋಶದ ಸಂಚಾಲಕಿ ಪ್ರೊ.ಸುಮನಾ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವತಯಾರಿ ಮಹತ್ವವನ್ನು ವಿವರಿಸಿದರು. ಸೌಜನ್ಯ ಸ್ವಾಗತಿಸಿ, ಸುಚಿತಾ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.





