ಮಂಡ್ಯ: ಭಾವಸಾರ ಕ್ಷತ್ರಿಯ ಸಮಾಜ ಸಂಘಟನೆಗೆ ಭಾವಿಇ ಅಸ್ತಿತ್ವ

ಮಂಡ್ಯ, ಫೆ.18: ಭಾವಸಾರ ಕ್ಷತ್ರಿಯ ಸಮುದಾಯ ಇಡೀ ರಾಷ್ಟ್ರದಲ್ಲೇ ಹಂಚಿಹೋಗಿದ್ದು, ಎಲ್ಲರನ್ನೂ ಒಗ್ಗೂಡಿಸುವ ಸಲುವಾಗಿ ಭಾವಸಾರ ವಿಷನ್ -108 ಅಸ್ತಿತ್ವಕ್ಕೆ ತರಲಾಗಿದೆ ಎಂದು ಭಾವಸಾರ ವಿಷನ್ ಇಂಡಿಯಾ(ಭಾವಿಇ) ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರರಾವ್ ಮಾಳೋದೆ ತಿಳಿಸಿದ್ದಾರೆ.
ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ರವಿವಾರ ನಡೆದ ಭಾವಸಾರ ವಿಷನ್ ಇಂಡಿಯಾದ ಜಿಲ್ಲಾ ಘಟಕದ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 1911ರಲ್ಲಿ ರಾಷ್ಟ್ರಮಟ್ಟದಲ್ಲಿ ಏಕೀಕರಣವಾದ ಬಳಿಕ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಅಸ್ತಿತ್ವಕ್ಕೆ ಬಂದಿತ್ತು. ಸಂಘಟನೆಗೆ ಕೊರತೆ ಇರಲಿಲ್ಲ. ಪ್ರಾರಂಭದಲ್ಲಿ ಎಲ್ಲರೂ ಬಹು ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದರು. ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು ಹೆಚ್ಚಾಗಿ ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಹತ್ತು ಹಲವು ಕಾರ್ಯಕ್ರಮಗಳಿಗೆ ಸಮಾಜದ ಬಂಧುಗಳು ಬರುತ್ತಿರಲಿಲ್ಲ. ಇದನ್ನು ಮನಗಂಡು ಭಾವಸಾರ ವಿಷನ್-108 ಅಸ್ತಿತ್ವಕ್ಕೆ ತರಲಾಯಿತು ಎಂದು ಅವರು ಹೇಳಿದರು.
ಸಮುದಾಯದ ಮುಖಂಡ ನಾರಾಯಣರಾವ್ ತಾತಸ್ಕರ್ ಅವರು ರೋಟರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಹೆಚ್ಚು ಬರುತ್ತಿರಲಿಲ್ಲ ಎಂಬುದನ್ನು ಮನಗಂಡು ಇದೊಂದು ಸೇವಾ ಸಂಸ್ಥೆಯನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಭಾವಸಾರ ವಿಷನ್-108 ಸ್ಥಾಪಿಸಿದರು ಎಂದು ಅವರು ತಿಳಿಸಿದರು.
ಈ ವಿಷನ್ ರಾಷ್ಟ್ರದ ಏಳು ರಾಜ್ಯಗಳಲ್ಲಿ ಕ್ಲಬ್ ಅಸ್ತಿತ್ವದಲ್ಲಿದ್ದು, ನೂರಾರು ಕ್ಲಬ್‍ಗಳು ಕೆಲಸ ಮಾಡುತ್ತಿವೆ. ಭಾಷೆ ಬೇರೆ ಬೇರೆಯಾಗಿರಬಹುದು. ಆದರೆ, ಮನಸ್ಸುಗಳು ಒಂದೇ. ಇದರಲ್ಲಿ ಎಲ್ಲ ವರ್ಗದ ಜನತೆ ಪಾಲ್ಗೊಂಡಿದ್ದು, ಸಣ್ಣ ಪುಟ್ಟ ಸಮಾರಂಭಗಳಿಗೂ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆ 2017-18ನೆ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಸಂಪಾದಕ ಸತೀಶ್‍ಜಾದವ್, ಡೆಪ್ಯೂಟಿ ಗೌರ್ನರ್, ಯೋಗೇಶ್ ಸಾಕ್ರೆ, ನೂತನ ಅಧ್ಯಕ್ಷ ಕೆ.ಎಸ್. ರಜನೀಕಾಂತ್ ಕಾಟೋಕರ್, ಸಂಸ್ಕೃತಿ ಕಾರ್ಯದರ್ಶಿ ಹರ್ಷ ಟಿ.ಎನ್. ಪೇಟ್ಕರ್, ಏರಿಯಾ ಗೌರ್ನರ್ ಮಲ್ಲಾರಿರಾವ್ ಕಾಂಗೋಕರ್, ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಲತಾ ಮಾಳೋದೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.







