ಮಂಡ್ಯ: ಆರೋಗ್ಯ ಸಂಪತ್ತು ರಕ್ಷಣೆಗೆ ಯೋಗಾಭ್ಯಾಸ ಅತ್ಯವಶ್ಯಕ; ಎಚ್.ಆರ್.ಅರವಿಂದ್

ಮಂಡ್ಯ, ಫೆ.18: ಆರೋಗ್ಯ ಸಂಪತ್ತು ಸಂರಕ್ಷಣೆಗೆ ಯೋಗಾಭ್ಯಾಸ ಅತ್ಯವಶ್ಯಕ ಎಂದು ಜಿಲ್ಲಾ ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹಾಲಹಳ್ಳಿಯ ಔಷಧ ಭವನದಲ್ಲಿ ಸ್ವಾಮಿ ವಿವೇಕಾನಂದ ಕನ್ನಡ ಯುವ ಯೋಗ ಬಳಗ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಯೋಗ ಒಕ್ಕೂಟ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 7ನೆ ವರ್ಷದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಮತ್ತು ಚಾಂಪಿಯನ್ ಆಫ್ ದಿ ಚಾಂಪಿಯನ್-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಸಕಲ ಸಂಪತ್ತುಗಳಿದ್ದರೂ ಆರೋಗ್ಯ ಸಂಪತ್ತೇ ಸರ್ವಶ್ರೇಷ್ಠ.ಇದನ್ನು ಉಳಿಸಿಕೊಳ್ಳಲು ಯೋಗ, ಉತ್ತಮ ಆಹಾರ, ದುಡಿಮೆ ಅತ್ಯಗತ್ಯ. ನಾವೆಲ್ಲರೂ ಇಂತಹ ಭಾರತೀಯ ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು, ವಯೋವೃದ್ದರು, ಮಧ್ಯಮ ವಯಸ್ಕರು ಯೋಗವನ್ನು ಇಲ್ಲಿ ಪ್ರದರ್ಶಿಸಿ ಉತ್ತಮವಾಗಿ ಸ್ಪರ್ಧೆ ನೀಡಿದ್ದಾರೆ. ಇಂತಹ ಯೋಗಪಟುಗಳನ್ನು ನಾವು ಗೌರವಿಸೋಣ. ಮುಂದಿನ ಪೀಳಿಗೆಗೆ ಇವರೇ ಮಾರ್ಗದರ್ಶನ ನೀಡುವಂತಾಗಲಿ ಎಂದು ಅವರು ಆಶಿಸಿದರು.
ಯೋಗಸ್ಪರ್ಧೆಯಲ್ಲಿ ಬೆಂಗಳೂರು, ಚಾಮರಾಜನಗರ, ಮೈಸೂರು, ಬಿಡದಿ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಿಂದ ಯೋಗಪಟುಗಳು ಆಗಮಿಸಿ ಉತ್ತಮ ಪ್ರದರ್ಶನ ನೀಡಿ ಬಹುಮನ ಪಡೆದರು.
ನಗರಸಭಾ ಸದಸ್ಯ ಶಿವಕುಮಾರ್, ಬಿಜೆಪಿ ಮುಖಂಡ ವಸಂತ್‍ಕುಮಾರ್, ಬಾಲಕೃಷ್ಣ, ಯೋಗಗುರು ಚಂದ್ರು ಇತರ ಗಣ್ಯರು ಉಪಸ್ಥಿತರಿದ್ದರು.







