ಮಹಿಳೆಯರ ದೈಹಿಕ, ಮಾನಸಿಕ ಸಮಸ್ಯೆ ಕುರಿತ ಉಪನ್ಯಾಸ

ಉಡುಪಿ, ಫೆ.19:ಹೂಡೆ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಹಿಳೆಯರ ದೈಹಿಕ, ಮಾನಸಿಕ ಸಮಸ್ಯೆಗಳು ಹಾಗೂ ಪರಿಹಾರ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಫೆ.16ರಂದು ಸಾಲಿಹಾತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಮಿಷನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಾ ರಾವ್, ಮಹಿಳೆಯರಲ್ಲಿ ದೈಹಿಕ ಸಾಮರ್ಥ್ಯತೆ ಕಡಿಮೆಯಾಗಲು ಕಾರಣ ಹಾಗೂ ಮಾನಸಿಕ ಒತ್ತಡದಿಂದ ಆಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಮಹಿಳೆಯರು ಯಾವ ರೀತಿಯ ಆಹಾರ ಪದ್ಧತಿ, ನೆಮ್ಮದಿ ಹಾಗೂ ವ್ಯಾಯಾಮದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ವಿವರಿಸಿದರು. ಮಹಿಳೆಯರು ಗರ್ಭಾವಸ್ಥೆಯಲ್ಲಿ ಎದುರಿಸುವ ಮಾನಸಿಕ ಸಮಸ್ಯೆಗಳಿಂದ ಶಿಶುವಿನ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿನಿಯರ ಪ್ರಶ್ನೆಗಳಿಗೂ ಸಹ ಸಮರ್ಪಕವಾದ ಉತ್ತರ ನೀಡಿದರು.
ಕಾಲೇಜಿನ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಶಬೀನಾ, ಸಾಲಿಹಾತ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸೂಮ್ ಅಬುಬಕರ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಗುಪ್ತ ಸ್ವಾಗತಿಸಿದರು. ರಿಹಾ ಪರ್ವೀನ್ ವಂದಿಸಿದರು. ಶೈಮಾ ಕಾರ್ಯಕ್ರಮ ನಿರೂಪಿಸಿದರು.





