ಗುರುವಾಯನಕೆರೆ :ಫೆ 23 ರಿಂದ ಮಾ.3 ರವರೆಗೆ ಉರೂಸ್
ಬೆಳ್ತಂಗಡಿ,ಫೆ.19: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಜುಮಾ ಮಸೀದಿಯಲ್ಲಿ 2 ವರ್ಷಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಖಾಝಿ ಸುನ್ನೀ ಸಂಯುಕ್ತ ಜಮಾಅತ್ ದ.ಕ ಜಿಲ್ಲೆ ಅಲ್‍ಹಾಜ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾ ಅಲವಿ ಇವರ ನೇತೃತ್ವದಲ್ಲಿ ಫೆ 23 ರಿಂದ ಮಾ.3 ರವರೆಗೆ ನಡೆಯಲಿದೆ ಎಂದು ಗುರುವಾಯನಕೆರೆ ದರ್ಗಾ ಕಮಿಟಿ ಅಧ್ಯಕ್ಷರು ಉಸ್ಮಾನ್ ಶಾಫಿ ತಿಳಿಸಿದ್ದಾರೆ.
ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಉರೂಸ್ ಸಮಾರಂಭದ ಪ್ರತಿದಿನ ಧಾರ್ಮಿಕ ಮತಪ್ರವಚನವನ್ನು ಕೇರಳ ಹಾಗೂ ಕರ್ನಾಟಕದ ಮತ ಪಂಡಿತರುಗಳಿಂದ ಸಡೆಸಲಾಗುತ್ತದೆ. ಫೆ.23ರಂದು ಜುಮಾ ನಮಾಝಿನ ಬಳಿಕ ಉರೂಸ್ ಸಮಾರಂಭಕ್ಕೆ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್‍ರವರ ನೇತೃತ್ವದಲ್ಲಿ ದರ್ಗಾ ಝಿಯಾರತ್ ನಡೆಯಲಿದೆ.
ಅಲ್ಲದೆ ಉರೂಸ್ ಪ್ರಯುಕ್ತ ದಿನಾಂಕ 25-02-2018 ರಂದು ದ.ಕ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ 10 ಜೊತೆ ಸಹೋದರಿಯರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ದಾನಿಗಳ ಕೊಡುಗೆ ಮೂಲಕ ನಡೆಸಲಾಗುತ್ತಿದೆ. ಸದ್ರಿ ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ, ಉಲಮಾ, ಉಮರಾ ನೇತಾರರು ಹಾಗೂ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾದಾತ್ ತಂಙಳ್, ಮಲ್‍ಜಅ್ ತಂಙಳ್, ಕಾಜೂರ್ ತಂಙಳ್, ಕಿಲ್ಲೂರ್‍ತಂಙಳ್, ಮನ್‍ಶರ್ ತಂಙಳ್, ಫಝಲ್‍ತಂಙಳ್, ಸಹಿತ ಸಯ್ಯಿದ್ ಸಾದಾತುಗಳು ಹಾಗೂ ಶಾಸಕ ವಸಂತ ಬಂಗೇರ, ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯು.ಟಿ ಖಾದರ್, ಶಾಹುಲ್ ಹಮೀದ್, ಮುಗುಳಿ ನಾರಾಯಣ ರಾವ್, ಕಣಚೂರು ಮೋನು ಹಾಜಿ ಸಹಿತ ಅನೇಕ ಗಣ್ಯ ಮಹನೀಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಫೆ.28 ರಂದು ಶೈಖುನಾ ಅಲ್‍ಹಾಜ್ ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೊಳ್, ಕೇರಳ ಇವರ ನೇತೃತ್ವದಲ್ಲಿ “ಬೃಹತ್ ದ್ಸಿಕ್ರ್ ಹಲ್ಕಾ ಮಜ್ಲಿಸ್” ಮಗ್ರಿಬ್ ನಮಾಝ್ ಬಳಿಕ ನಡೆಯಲಿದ್ದು ತಾಲೂಕಿನ ಹೆಸರಾಂತ ಎಲ್ಲಾ ತಂಙಳ್ ರವರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಮತ ಪ್ರವಚನ ಲುಕ್‍ಮಾನುಲ್ ಹಕೀಂ ಸಖಾಫಿ ಪುಲ್ಲಾರ ಕೇರಳ ಇವರು ನಡೆಸಲಿದ್ದಾರೆ.
ಮಾ.3ರಂದು ಉರೂಸ್ ಸಮಾರಂಭದ ಸಮಾರೋಪ ಸಮಾರಂಭ ನಡೆಯಲಿದ್ದು ಬೆಳಿಗ್ಗೆ 9 ಗಂಟೆಗೆ “ಖತ್‍ಮುಲ್ ಖುರ್ ಆನ್” ಪಾರಾಯಣ ದರ್ಗಾ ವಠಾರದಲ್ಲಿ ನಡೆಯಲಿದ್ದು ರಾತ್ರಿ ಗಂಟೆ 7 ರಿಂದ ದ.ಕ ಜಿಲ್ಲಾ ಖಾಜಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾಶೀರ್ವಚನ ನೀಡಲಿದ್ದಾರೆ.
ಶೈಖುನಾ ಅಲ್‍ಹಾಜ್ ತಾಜುಶ್ಶರಿಅ: ಆಲಿಕುಂಞಿ ಉಸ್ತಾದ್ ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ. ಮುಳ್ಳೂರ್‍ಕೆರೆ ಮುಹಮ್ಮದ್ ಅಲಿ ಸಖಾಫಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ.
ಹಲವು ರೀತಿಯ ಸಮಾಜ ಮುಖಿ ಕಾರ್ಯಕ್ರಮಗಳು ಈಗಾಗಲೇ ದರ್ಗಾ ವತಿಯಿಂದ ನಿರ್ವಹಿಸುತ್ತಿದ್ದು, ದರ್ಗಾದಿಂದ ಬರುವ ಹರಕೆಯ ಮೊತ್ತದಿಂದ ಹಾಗೂ ದಾನಿಗಳಿಂದ ಪಡೆದ ಆಹಾರ ಸಾಮಗ್ರಿಗಳಿಂದ ಸುಮಾರು 40 ರಷ್ಟು ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸವನ್ನು ನೀಡುತ್ತಿದ್ದು ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗುತ್ತಿದೆ, ಸಾವಿರ ಜಮಾಅತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸದ್ರಿ ದರ್ಗಾದ ಅಧೀನದಲ್ಲಿ ಸುಮಾರು 20 ಮಸೀದಿಗಳು ಒಳಪಡುತಿದ್ದು. ಪ್ರಸ್ತುತ 6 ಮಸೀದಿಗಳಿಗೆ ಮಾತ್ರ ಮಾಸಿಕ ಸುಮಾರು 10,000 ರೂ. ಗೌರವ ಧನ ನೀಡಲಾಗುತ್ತಿದೆ. ಮಸೀದಿಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ದರ್ಗಾದ ಸಂಪೂರ್ಣ ಸಹಕಾರವನ್ನು ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್‍ಕಮಿಟಿ, ಗುರುವಾಯನಕೆರೆ ಅಧ್ಯಕ್ಷರಾದ ಎಂ.ಉಸ್ಮಾನ್ ಬಳಂಜ, ದರ್ಗಾಕಮಿಟಿ, ಗುರುವಾಯನಕೆರೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ, ಸ್ವಲಾತ್ ಕಮಿಟಿ ಗುರುವಾಯನಕೆರೆ ಅಧ್ಯಕ್ಷ ಉಮರಬ್ಬ, ಜತೆಕಾರ್ಯದರ್ಶಿ, ದರ್ಗಾಕಮಿಟಿ, ಗುರುವಾಯನಕೆರೆ ಹಾಜಿ ಅಬ್ದುಲ್ ಲತೀಫ್, ದರ್ಗಾಕಮಿಟಿ ಸದಸ್ಯ ಹಸೈನಾರ್ ಶಾಫಿ, ಇದ್ದರು.







