ದಾವಣಗೆರೆ: ಅರಣ್ಯಭೂಮಿ ಹಕ್ಕು ಪತ್ರಕ್ಕೆ ಆಗ್ರಹಿಸಿ ಧರಣಿ

ದಾವಣಗೆರೆ,ಪೆ.19 : ಅರಣ್ಯಭೂಮಿ ಹಕ್ಕು ಪತ್ರಕ್ಕೆ ಆಗ್ರಹಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಉಚ್ಚನ್ಯಾಯಲಯ ಜನವರಿ 11, 2018 ರ ಆದೇಶನ್ವಯ ಶಾಸಕರು ಗೋಮಾಳ ಜಮೀನಿನ ಸಾಗುವಳಿ ಚಟುವಟಿಕೆಯನ್ನು ಆದ್ಯತೆಯ ಮೇರೆಗೆ ವಿತರಿಸಬೇಕು. ಕಂದಾಯ ಸಚಿವಾಲಯದ ಸುತ್ತೋಲೆಯನ್ವಯ ಶಾಸಕರ ನೇತೃತ್ವದ ಅಕ್ರಮ ಸಕ್ರಮೀಕರಣ ಸಮಿತಿ ಸಭೆಗಳು ನಿಯಮಿತವಾಗಿ ಪ್ರತಿವಾರು ಸಭೆ ನಡೆಸಿ ಬಾಕಿ ಇರುವ ಎಲ್ಲಾ ಬಗರ್ ಹುಕುಂ ಜಮೀನು ಮಂಜೂರಿಗೆ ಕ್ರಮ ಜರುಗಿಸಬೇಕು. ಬಗರ್ ಹುಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಅನುಕ್ರಮವಾಗಿ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ಪಡೆದ ರೈತರ ಹೆಸರು, ಪಹಣಿ ಪತ್ರಿಕೆಯಲ್ಲಿ ಪ್ರಕಟಿಸಬೇಕು.
ಸರ್ಕಾರದ ಸುತ್ತೋಲೆ ನಂ. ಆರ್ ಡಿ 91, ಎಲ್ ಪಿಜಿ 98, 14-7-1999ರನ್ವಯ ಪರಿಶಿಷ್ಟ ಪಂಗಡ ಮತ್ತು ಪ. ಜಾತಿಯ ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ನೀಡುವಾಗ ಯಾವುದೇ ಶುಲ್ಕ ಪಡೆಯಬಾರದು. ಅರಣ್ಯ ಹಕ್ಕುಗಳನ್ನು ಹೊಂದಿರುವವರಿಗೆ ಕ್ಲೇಮ ತರುವಾಯ ಬುಡಕಟ್ಟು ಮತ್ತು ಸಮಾಜ ಕಲ್ಯಾಣ ಇಲಾಖೆ ಪರಿಸರ ಮತ್ತು ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಬೆಂಬಲ ಮತ್ತು ಆಸರೆ ನೀಡಿ ಜಮೀನಿನ ಉತ್ಪಾದಕತೆ ಹೆಚ್ಚಿಸಲು ಅನುವು ಮಾಡಿಕೊಡಬೇಕು. ಸಮುದಾಯಕ್ಕೆ ಅರಣ್ಯ ಸಂಪನ್ಮೂಲದ ಮೇಲಿನ ಹಕ್ಕನ್ನು ಒದಗಿಸಲು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜೆ.ಉಮೇಶ್ ನಾಯ್ಕ್, ಷಣ್ಮುಖನಾಯ್ಕ್, ರೂಪಾನಾಯ್ಕ್, ಶಂಕರ್, ರೇಣುಕಮ್ಮ, ರವಿಕುಮಾರ್, ಮಂಜಾನಾಯ್ಕ್, ಶ್ರೀನಿವಾಸ್, ಪ್ರಭು, ತಿಪ್ಪಣ್ಣ, ನಾಗರಾಜಪ್ಪ, ಭೀಮಪ್ಪ, ವಿರೂಪಾಕ್ಷಪ್ಪ ಸೇರಿದಂತೆ ಪ್ರತಿಭಟನೆಯಲ್ಲಿದ್ದರು.







