ಚಾಮರಾಜನಗರ: ಶಾಸಕರಿಂದ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಚಾಲನೆ
ಚಾಮರಾಜನಗರ: ಫೆ.19: ಸಮೀಪದ ಬೇಡರಪುರ ಇಂಜಿನಿಯರಿಂಗ್ ಕಾಲೇಜು ಬಳಿ 7.5 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಯೋಜನೆಯಡಿಯಲ್ಲಿ ಕರ್ನಾಟಕ ವಸತಿ ಶಾಲೆಗಳ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಮಹಿಳಾ ಮತ್ತು ಪುರುಷ ಇಂಜಿನಿಯರಿಂಗ್ ವಸತಿ ನಿಲಯ, ಪೋಸ್ಟ್ ಮೆಟ್ರಿಕ್ ಮಹಿಳಾ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ವಿದ್ಯಾರ್ಥಿಗಳ ಜ್ಞಾನ ದಾಹ ನೀಗಿಸಲು ಈಗಾಗಲೇ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆದಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕಾಲೇಜನ್ನು ಸಹ ತೆರೆಯಲಾಗುವುದು.
ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಕಾಳಜಿ ವಹಿಸಿರುವ ಮುಖ್ಯಮಂತ್ರಿ ಹಿಂದುಳಿದ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸುತ್ತಿದ್ದಾರೆ. ಹಾಸ್ಟೆಲ್ ವಂಚಿತರಿಗೆ ವಿದ್ಯಾಸಿರಿ ಸೇರಿದಂತೆ ಸಾಕಷ್ಟು ಉಪಯುಕ್ತ ಯೋಜನೆಗಳನ್ನು ಸರ್ಕಾರ ಕಲ್ಪಿಸಿದ್ದು, ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದು ತಾವು ಓದಿದ ಜಿಲ್ಲೆಯ, ಗ್ರಾಮದ ಅಭಿವೃದ್ದಿಗೆ ಶ್ರಮಿಸುವುದರ ಜೊತೆಗೆ ಯುವಕರು ಉತ್ತಮ ಉದ್ಯೋಗ ಪಡೆದು ಸ್ವಾವಲಂಬಿಯಾಗಿ ಬದುಕಲಿ ಎಂಬುವುದೇ ಇದರ ಮೂಲ ಉದ್ದೇಶ. ಅದುದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಜ್ಞಾನವಂತರಾಗಿ ಉತ್ತಮ ಸಮಾಜ ನಿರ್ಮಿಸಬೇಕೆಂದು ಸಲಹೆ ನೀಡಿದರು.
ಇಂದು ಈ ಉದ್ದೇಶದಿಂದಲೇ ಮಹಿಳೆಯರು ಹಾಗೂ ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಪೋಸ್ಟ್ ಮ್ಯಾಟ್ರಿಕ್ ಹುಡುಗಿಯರು ಅನುಕೂಲಕ್ಕಾಗಿ ಪ್ರತ್ಯೇಕವಾಗಿ 3 ವಸತಿ ನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರು, ಶೌಚಾಲಯ, ವಸತಿ ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಲು ಉದ್ದೇಶಿಸಿದ್ದು ಮೂರು ಪ್ರತ್ಯೇಕ ಬೋರ್ವೆಲ್ ಸಹ ಕಲ್ಪಿಸಲಾಗುವುದು. ಒಟ್ಟಾರೆ ವಿದ್ಯಾರ್ಥಿಗಳ ದೀರ್ಘಕಾಲಿನ ಶಾಶ್ವತ ಉಪಯೋಗದ ದೃಷ್ಠಿಯಿಂದ ಗುಣಮಟ್ಟದಿಂದ ನಿರ್ಮಿಸಲಾಗುವುದೆಂದು ಶಾಸಕರು ತಿಳಿಸಿದರು.
ಆದಷ್ಟು ಶೀಘ್ರವಾಗಿ ಹಾಗೂ ಸುಸಜ್ಜಿತವಾಗಿ ವಸತಿ ನಿಲಯವನ್ನು ಎಚ್ಚರಿಕೆಯಿಂದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಬೇಕೆಂದು ಸ್ಥಳದಲ್ಲಿದ್ದ ಗುತ್ತಿಗೆದಾರ ಹಾಗೂ ಇಂಜಿನಿಯರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕನಿಷ್ಠ ಸಲಹಾ ವೇತನ ಮಂಡಳಿ ಅಧ್ಯಕ್ಷ ಉಮೇಶ್, ಎಪಿಎಂಸಿ ಅಧ್ಯಕ್ಷ ರವಿಕುಮಾರ್, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ಸೋಮಲಿಂಗಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಜಯಣ್ಣ, ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮ್ಮದ್ ಅಸ್ಗರ್ ಮುನ್ನಾ, ಮಾಜಿ ಗ್ರಾ.ಪಂ ಅಧ್ಯಕ್ಷ ಕುಮಾರ್. ಗುತ್ತಿಗೆದಾರ ನರಸಿಂಹಮೂರ್ತಿ, ವಿಲಿಯಂ, ಬಾಬು ಇತರರು ಇದ್ದರು.