ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ: ಕೆ.ಎಸ್.ವಿಮಲಾ ಆತಂಕ

ಮದ್ದೂರು, ಫೆ.19: ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಅಪಾರ ಪ್ರಗತಿ ಸಾಧಿಸಿದ್ದರೂ ಮಹಿಳೆಯರ ಮತ್ತು ಮಕ್ಕಳ ಮೇಲೆ ದಿನನಿತ್ಯ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗದಿರುವ ಬಗ್ಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳೆಯರ ಪರಿಸ್ಥಿತಿ ದಿನೇದಿನೆ ದುಸ್ಥರವಾಗುತ್ತಿದ್ದು, ಬೆಲೆಗಳು ವಿಪರೀತ ಏರಿಕೆಯಾಗಿ ಜೀವನ ನಡೆಸಲು ಕಷ್ಟಕರವಾಗಿದ್ದರೂ ಕುಟುಂಬಗಳ ಹೊರೆಯನ್ನು ಮಹಿಳೆಯರ ಮೇಲೆ ವರ್ಗಾವಣೆ ಮಾಡುತ್ತಿದ್ದಾರೆ ಎಂದರು.
ಆಡಳಿತ ನಡೆಸುವ ಸರಕಾರಗಳು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರಲ್ಲದೇ, ಸರಕಾರಗಳು ಮಂಡಿಸುವ ಬಜೆಟ್‍ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿತ್ಯ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುಲು ಸರಕಾರಗಳು ಶ್ರಮಿಸಬೇಕೆಂದು ಮನವಿ ಮಾಡಿದರು.
ಮೂಲ ಸೌಲಭ್ಯಗಳನ್ನು ಪಡೆಯಲು ಮಹಿಳಾ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆಯಿದ್ದು, ಪ್ರತಿಯೊಬ್ಬರು ಸಂಘಟಿತರಾಗಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕೆಂದರಲ್ಲದೇ ಅನ್ಯಾಯದ ವಿರುದ್ಧ ಧನಿಎತ್ತುವ ಮೂಲಕ ಸ್ಥಳೀಯ ಸಂಘ, ಸಂಸ್ಥೆಗಳು ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದರು.
ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಮಹಿಳೆ ಪುರುಷನಷ್ಟೇ ಸರಿಸಮವಾಗಿದ್ದು, ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಸಿಗದ ಪ್ರಾತಿನಿದ್ಯ, ವಂಚನೆ ವಿರುದ್ಧ ಹೋರಾಟದ ಮುಂಚೂಣಿಯ ಸ್ಥಾನದಲ್ಲಿ ನಿಲ್ಲುವಂತೆ ತಿಳಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ, ಪದಾಧಿಕಾರಿಗಳಾದ ಶೋಭಾ, ಲತಾ, ಸುಶೀಲ, ಮಂಜುಳಾ, ಸುನೀತ ಇತರರು ಉಪಸ್ಥಿತರಿದ್ದರು.







