ನೀರವ್ ಮೋದಿಯ 6 ಮನೆಗಳ ಮೌಲ್ಯ ಎಷ್ಟು ಕೋಟಿ ರೂ.ಗಳು ಗೊತ್ತಾ?
ಊಹಿಸಲಸಾಧ್ಯ ಈ ಮೊತ್ತ!
ಹೊಸದಿಲ್ಲಿ, ಫೆ.20: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆಯ ಪ್ರಮುಖ ಆರೋಪಿ ನೀರವ್ ಮೋದಿಗೆ ಸೇರಿದ 29 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯು ಕೆಲವು ಜಪ್ತಿ ಮಾಡಿದೆ. ಇವುಗಳಲ್ಲಿ ನೀರವ್ ಮೋದಿ ಮತ್ತು ಅವರ ಪತ್ನಿ ಮುಂಬೈಯ ವರ್ಲಿಯಲ್ಲಿರುವ ಸಮುದ್ರ ಮಹಲ್ನಲ್ಲಿ ಹೊಂದಿರುವ ಆರು ಐಷಾರಾಮಿ ಫ್ಲ್ಯಾಟ್ಗಳೂ ಸೇರಿವೆ. ಈ ಆರು ಫ್ಲ್ಯಾಟ್ಗಳ ಒಟ್ಟು ಮೌಲ್ಯವೇ 900 ಕೋಟಿ ರೂ. ಆಗಿದೆ. ಜಪ್ತಿ ಮಾಡಲಾದ ಅಷ್ಟೂ ಆಸ್ತಿಯ ಒಟ್ಟು ಮೌಲ್ಯ ಕೆಲವು ಸಾವಿರ ಕೋಟಿ ರೂ. ಆಗಿದೆ ಎಂದು ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಸಮುದ್ರಾಭಿಮುಖವಾಗಿರುವ ಎಲ್ಲ ಆರು ಫ್ಲ್ಯಾಟ್ಗಳು ನೀರವ್ ಮೋದಿ ಮತ್ತು ಅವರ ಪತ್ನಿ ಅಮಿ ಮೋದಿ ಹೆಸರಲ್ಲಿ ಜಂಟಿಯಾಗಿ ನೋಂದಾಯಿಸಲಾಗಿದ್ದು ಪ್ರತಿಯೊಂದು ಫ್ಲ್ಯಾಟ್ನ ಬೆಲೆ 150 ಕೋಟಿ ರೂ.ಗೂ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.
ನೀರವ್ಗೆ ಸೇರಿದ ಫೈರ್ಸ್ಟಾರ್ ಇಂಟರ್ನ್ಯಾಶನಲ್ ಪ್ರೈ, ಲಿ. ಮುಂಬೈಯಲ್ಲಿ ಹದಿನೈದು ಸ್ಥಿರಾಸ್ತಿಗಳನ್ನು ಹೊಂದಿದೆ. ಇವುಗಳಲ್ಲಿ, ಬಾಂಡ್ರಾ-ಕುರ್ಲಾ ಸಂಕೀರ್ಣದಲ್ಲಿರುವ ವಾಣಿಜ್ಯ ಆಸ್ತಿ, ಒಪೆರಾ ಹೌಸ್ನ ಪ್ರಸಾದ್ ಚೇಂಬರ್ಸ್ನ ಫ್ಲಾಟ್, ಫೋರ್ಟ್ ಮುಂಬೈಯ ಕಾಲಾ ಗೋಡಾದಲ್ಲಿ ಐಟಿಟಿಎಸ್ ನಿಲಯ, ಲೋವರ್ ಪರೇಲ್ನ ಕಮಲಾ ಮಿಲ್ಸ್ನಲ್ಲಿರುವ ಟ್ರೇಡ್ ಪಾಯಿಂಟ್ನಲ್ಲಿ ಒಂದು ಕೊಠಡಿ ಹಾಗೂ ಅಂಧೇರಿಯ ಎಂಐಡಿಸಿಯಲ್ಲಿ ಆರ್ಮಿ ನೇವಿ ಕಟ್ಟಡ ಸೇರಿದೆ. ಫೈರ್ಸ್ಟಾರ್ ದಿಲ್ಲಿಯ ಭದ್ರತಾ ಕಾಲನಿಯಲ್ಲೂ ವಸತಿಯನ್ನು ಹೊಂದಿದೆ. ಆದಾಯ ತೆರಿಗೆ ಇಲಾಖೆಯು ಜೆರ್ಸಿಯಲ್ಲಿ ನೋಂದಣಿಯಾಗಿರುವ ನೀರವ್ರ ಮೋಂಟೆಕ್ರಿಸ್ಟೊ ಸಂಸ್ಥೆಯ ಕುರಿತು ಬಹಮಾಸ್, ಸಿಂಗಾಪುರ ಮತ್ತು ಜೆರ್ಸಿಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ. ನೀರವ್ನ ಭಾರತದಲ್ಲಿರುವ ಕಂಪೆನಿಗಳು ಸಿಪ್ರಸ್ನ ಜೇಡ್ ಬ್ರಿಡ್ಜ್ ಹೋಲ್ಡಿಂಗ್ಸ್ ಪ್ರೈ. ಲಿ. ಸಂಸ್ಥೆಯಿಂದ ಪಡೆದುಕೊಂಡಿರುವ 284 ಕೋಟಿ ರೂ. ಹಾಗೂ ಸಿಂಗಾಪುರ ಮೂಲದ ಇಸ್ಲಿಂಗ್ಟನ್ ಇಂಟರ್ನ್ಯಾಶನಲ್ ಹೋಲ್ಡಿಂಗ್ಸ್ನಿಂದ ಪಡೆದುಕೊಂಡ 271 ಕೋಟಿ ರೂ. ಬಗ್ಗೆ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪೈಕಿ ಇಸ್ಲಿಂಗ್ಟನ್ ಇಂಟರ್ನ್ಯಾಶನಲ್ನಿಂದ ಪಡೆದ ಮೊತ್ತದ ಫಲಾನುಭವಿ ನೀರವ್ ಮೋದಿಯ ಸಹೋದರಿ ಪೂರ್ವಿ ಮೋದಿಯಾಗಿದ್ದಾರೆ ಎಂದು ತನಿಖೆಯ ವೇಳೆ ಬಯಲಾಗಿರುವುದಾಗಿ ವರದಿ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ಶನಿವಾರದಂದು ಮೆಹುಲ್ ಚೋಕ್ಸಿಗೆ ಸೇರಿದ ಏಳು ಆಸ್ತಿಗಳನ್ನು ಜಪ್ತಿ ಮಾಡಿದೆ. ಚೋಕ್ಸಿ, ಪಿಎನ್ಬಿ ವಂಚನೆ ಪ್ರಕರಣದ ಎರಡನೇ ಆರೋಪಿಯಾಗಿದ್ದಾರೆ. ಈ ಪೈಕಿ ವಡಾಲಾದಲ್ಲಿರುವ ಸ್ಪ್ರಿಂಗ್ ಟವರ್ನಲ್ಲಿ ಎರಡು ಫ್ಲ್ಯಾಟ್ಗಳು ಮತ್ತು ವಲ್ಕೇಶ್ವರ್ನ ಗೋಕುಲ್ನಲ್ಲಿ ಎರಡು ಫ್ಲ್ಯಾಟ್ಗಳು ಚೋಕ್ಸಿ ಹೆಸರಲ್ಲಿದೆ. ಉಳಿದ ಆಸ್ತಿಗಳು ಗೀತಾಂಜಲಿ ಜೆಮ್ಸ್ ಲಿ. ಹಾಗೂ ಗಿಲಿ ಇಂಡಿಯಾ ಲಿ. ಹೆಸರಲ್ಲಿದೆ. ತೆರಿಗೆ ಇಲಾಖೆಯು ಚೋಕ್ಸಿಗೆ ಸೇರಿದ ಒಂಬತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದರೆ ನೀರವ್ ಹಾಗೂ ಅವರ ಸಂಸ್ಥೆಗಳಿಗೆ ಸೇರಿದ 105 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದೆ.