ಮಹಿಳಾ ಉದ್ಯಮಿಗಳ ವಿಭಾಗ ಆರಂಭಕ್ಕೆ ನೀತಿ ಆಯೋಗ ನಿರ್ಧಾರ

ಹೊಸದಿಲ್ಲಿ, ಫೆ.21: ಭಾರತದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ನೀತಿ ಆಯೋಗವು ಮಹಿಳಾ ಉದ್ಯಮಿಗಳ ವಿಭಾಗವನ್ನು ಆರಂಭಿಸಿ ಅವರಿಗೆ ವೇದಿಕೆಯೊಂದನ್ನು ಒದಗಿಸಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿರುವುದಾಗಿ ಆಯೋಗ ತಿಳಿಸಿದೆ. ಈ ವಿಭಾಗವು ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ನೀತಿ ಆಯೋಗದ ‘ಮಹಿಳಾ ಉದ್ಯಮಶೀಲತೆ ಮತ್ತು ನವಪರಿಕಲ್ಪನಾ ವಿಭಾಗ’ ಎಂದು ಕರೆಯಲಾಗುವ ಈ ವಿಭಾಗದ ಮುಖ್ಯಸ್ಥರಾಗಿ ನೀತಿ ಆಯೋಗದ ಸಲಹೆಗಾರರಾದ ಅನ್ನಾ ರಾಯ್ ಕಾರ್ಯನಿರ್ವಹಿಸುತ್ತಾರೆ . 10,000 ಕೋಟಿ ರೂ. ಮೊತ್ತದ ನಿಧಿಯನ್ನು ಈ ವಿಭಾಗ ಹೊಂದಲಿದ್ದು ಮುದ್ರಾ ಸೂಕ್ಷ್ಮ ಸಾಲದ ಯೋಜನೆಯ ವ್ಯಾಪ್ತಿಗೆ ಒಳಪಡಲಿದೆ ಎಂದವರು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ಭಾರತ- ಅಮೆರಿಕ ಜಂಟಿ ಸಹಭಾಗಿತ್ವದಲ್ಲಿ ನಡೆದಿದ್ದ ಜಾಗತಿಕ ಉದ್ಯಮಶೀಲತಾ ಸಮಾವೇಶದ ಫಲಶೃತಿಯಾಗಿ ಭಾರತದ 24ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಅಮೆರಿಕಕ್ಕೆ ವ್ಯಾಪಾರ ಪ್ರವಾಸ ಕೈಗೊಂಡಿದ್ದಾರೆ.
ಭಾರತದಲ್ಲಿ ಮಹಿಳಾ ಉದ್ಯಮಿಗಳು ಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ನೀತಿ ಆಯೋಗದ ಸದಸ್ಯೆ, ಸಲಹೆಗಾರರಾದ ಅನ್ನಾ ರಾಯ್ ತಿಳಿಸಿದ್ದಾರೆ. ಮಹಿಳಾ ಉದ್ಯಮಿಗಳಲ್ಲಿ ಪ್ರಚಲಿತ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಿ , ಪಾಲುದಾರರನ್ನು ಪರಸ್ಪರ ಜೋಡಿಸುವ ಹಾಗೂ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದವರು ಹೇಳಿದ್ದಾರೆ. ಈ ಕಾರ್ಯವನ್ನು ಮಹಿಳಾ ಉದ್ಯಮಿಗಳ ವಿಭಾಗ ಮಾಡಲಿದೆ ಎಂದು ಅನ್ನಾ ರಾಯ್ ಹೇಳಿದ್ದಾರೆ.







