ಮಾಹಿತಿ ಸಿಂಧು ಯೋಜನೆ ನಿರೀಕ್ಷಿತ ಫಲ ನೀಡಲಿಲ್ಲ: ತನ್ವೀರ್‌ಸೇಠ್

ಬೆಂಗಳೂರು, ಫೆ.21: ಮಾಹಿತಿ ಸಿಂಧು ಯೋಜನೆಯು ನಿರೀಕ್ಷಿತಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ರಾಜ್ಯ ಸರಕಾರವು ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್ ಕಲಿಕೆಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ಹೇಳಿದರು.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ.ಎಸ್.ರಫೀಕ್ ಅಹ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಐಸಿಟಿ(ಮಾಹಿತಿ ಸಿಂಧು ಯೋಜನೆ) ಹಂತ 1, 2, 3 ಯೋಜನೆಗಳು ನಿರೀಕ್ಷಿತ ಪ್ರಮಾಣದ ಫಲಿತಾಂಶವನ್ನು ನೀಡಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಸರಕಾರವು ಪ್ರತಿ ವರ್ಷ ಒಂದು ಸಾವಿರ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಿ, ಮಕ್ಕಳಲ್ಲಿ ಕಂಪ್ಯೂಟರ್ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ತನ್ವೀರ್ ಸೇಠ್ ಹೇಳಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 72 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 11 ಸಿಎಎಲ್‌ಸಿ ಶಾಲೆಗಳಿಗೆ ಒಟ್ಟು 55 ಕಂಪ್ಯೂಟರ್‌ಗಳನ್ನು ಹಾಗೂ 5 ಸರಕಾರಿ ಪ್ರೌಢ ಶಾಲೆಗಳಿಗೆ ಆರ್‌ಎಂಎಸ್‌ಎ ಮತ್ತು ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ(ಟಿಎಎಲ್‌ಪಿ) ಯೋಜನೆಗಳಡಿ 6 ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
61 ಸರಕಾರಿ ಪ್ರಾಥಮಿಕ ಶಾಲೆಗಳಿಗೆ 216 ಕಂಪ್ಯೂಟರ್‌ಗಳು ಹಾಗೂ 5 ಸರಕಾರಿ ಪ್ರೌಢಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 85 ಕಂಪ್ಯೂಟರ್‌ಗಳ ಅವಶ್ಯಕವಿದೆ. ಅದನ್ನು ಮುಂದಿನ ದಿನಗಳಲ್ಲಿ ಟೆಂಡರ್ ಕರೆದು ಪೂರೈಸಲಾಗುವುದು ಎಂದು ತನ್ವೀರ್‌ಸೇಠ್ ಹೇಳಿದರು.







