ಬೆಣ್ಣೆತೊರೆ ನೀರಾವರಿ ಯೋಜನೆಗೆ 150 ಕೋಟಿ ಆಡಳಿತಾತ್ಮಕ ಅನುಮೋದನೆ: ಎಂ.ಬಿ.ಪಾಟೀಲ್

ಬೆಂಗಳೂರು, ಫೆ.21: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೆತೊರೆ ನೀರಾವರಿ ಯೋಜನೆಯ ಕಾಲುವೆಗಳ ಆಧುನೀಕರಣಕ್ಕಾಗಿ ರಾಜ್ಯ ಸರಕಾರ 150 ಕೋಟಿ ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅಮರನಾಥ್ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಣ್ಣೆತೊರೆ ಯೋಜನೆಯ ಬಲದಂಡೆ ಹಾಗೂ ಎಡದಂಡೆ ಕಾಲುವೆ ಮತ್ತು ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿಯಡಿ ಸಿ.ಸಿ.ಲೈನಿಂಗ್, ಸಿಡಿಗಳ ಪುನರ್‌ನಿರ್ಮಾಣಕ್ಕೆ ಅವಕಾಶ ಮಾಡಲಾಗಿದ್ದು, ಈ ಕಾಮಗಾರಿಯನ್ನು ಮಾರ್ಚ್ 2018ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ಕಾಮಗಾರಿಗೆ ಈವರೆಗೆ 99 ಕೋಟಿ ರೂ.ವೆಚ್ಚವಾಗಿದೆ. ಅಲ್ಲದೆ, ಬೆಣ್ಣೆತೊರೆ ಯೋಜನೆಯಡಿ 20234 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. ಅಲ್ಲದೆ, ಜಮೀನುಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಿ.ಸಿ. ಲೈನಿಂಗ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.





