ಫೆ.24ರಿಂದ ‘ಕ್ಲೀನ್ ಬೆಂಗಳೂರು’ ಅಭಿಯಾನ
ಬೆಂಗಳೂರು, ಫೆ.21: ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ನಿಟ್ಟಿನಲ್ಲಿ ಬಿಬಿಎಂಪಿ ವತಿಯಿಂದ ಫೆ.24ರಿಂದ ಮಾ. 3ರವರೆಗೆ ನಗರದಾದ್ಯಂತ ‘ಕ್ಲೀನ್ ಬೆಂಗಳೂರು’ ಅಭಿಯಾನ ಹಮ್ಮಿಕೊಂಡಿದೆ.
ಬುಧವಾರ ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಉದ್ದೇಶದಿಂದ ಅಭಿಯಾನವನ್ನು ಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಘಗಳು ಸಹ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ. ಅಭಿಯಾನದಲ್ಲಿ ಭಾಗವಹಿಸುವವರಿಗೆ ಅಗತ್ಯವಾದ ಸ್ವಚ್ಛತಾ ಉಪಕರಣಗಳನ್ನು ಬಿಬಿಎಂಪಿ ವತಿಯಿಂದ ನೀಡಲಾಗುವುದು ಎಂದರು.
ಅಭಿಯಾನ ಕುರಿತಂತೆ ಈಗಾಗಲೇಪಾಲಿಕೆಯ ಎಲ್ಲ ವಲಯಗಳ ಎಂಜಿನಿಯರ್‌ಗಳು, ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳು ಹಾಗೂ ಪಾಲಿಕೆಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರೊಂದಿಗೆ ಸಭೆ ನಡೆಸಲಾಗಿದೆ. ಅಭಿಯಾನಕ್ಕೆ ಅಗತ್ಯವಾದ ಟ್ರಾಕ್ಟರ್, ಟಿಪ್ಪರ್ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಪಾಲಿಕೆಯ ವ್ಯಾಪ್ತಿಯಲ್ಲಿರುವ ತ್ಯಾಜ್ಯ, ಕಟ್ಟಡ ಅವಶೇಷ, ಫ್ಲೆಕ್ಸ್, ಬಂಟಿಂಗ್ಸ್ ಹಾಗೂ ಭಿತ್ತಿಪತ್ರಗಳನ್ನು ತೆರವುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೇಯರ್ ಆರ್.ಸಂಪತ್‌ರಾಜ್ ಮಾತನಾಡಿ, ಬಿಬಿಎಂಪಿಯಿಂದ ಅಭಿವೃದ್ಧಿಪಡಿಸಿರುವ ‘ಫಿಕ್ಸ್ ಮೈಸ್ಟ್ರೀಟ್ ಆ್ಯಪ್’ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ದೂರುಗಳಿಗೆ ಸ್ಪಂದಿಸಿದ ಎಂಜಿನಿಯರ್‌ಗಳನ್ನು ಘನತ್ಯಾಜ್ಯ ಸಂಸ್ಕರಣಾ ಘಟಕಗಳು ಅಥವಾ ಕ್ವಾರಿಗಳ ನಿರ್ವಹಣೆ ನೋಡಿಕೊಳ್ಳಲು ನಿಯೋಜಿಸಲಾಗುವುದು. ಜತೆಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಉಪಸ್ಥಿತರಿದ್ದರು.
ನಗರದಲ್ಲಿರುವ ಎಲ್ಲ ಖಾಲಿ ನಿವೇಶನಗಳಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸುವಂತೆ ಮಾಲಕರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ತ್ಯಾಜ್ಯ ತೆರವುಗೊಳಿಸಲು ಮುಂದಾಗದಿದ್ದರೆ, ಪಾಲಿಕೆಯಿಂದ ನಿವೇಶನಗಳಲ್ಲಿನ ತ್ಯಾಜ್ಯ ತೆರವುಗೊಳಿಸಿ ನಂತರ ಅದರ ವೆಚ್ಚವನ್ನು ಪಾವತಿಸುವಂತೆ ಮಾಲಕರಿಗೆ ನೋಟಿಸ್ ನೀಡಲಾಗುವುದು.
-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ







