ನಮ್ಮ ಬದ್ಧತೆ ಪ್ರಶ್ನೆ ಮಾಡಲು ಯಾರಿಂದಲೂ ಸಾದ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ. 21: ‘ಸಾಮಾಜಿಕ ನ್ಯಾಯದ ಬಗ್ಗೆ ಇರುವ ನಮ್ಮಬದ್ಧತೆಯನ್ನು ಯಾರಿಂದಲು ಪ್ರಶ್ನೆ ಮಾಡಲಿಕ್ಕೆ ಸಾದ್ಯವಿಲ್ಲ. ನಾನು ಯಾವಾಗಲು ಸಾಮಾಜಿಕ ನ್ಯಾಯದಡಿ ಕಾರ್ಯನಿರ್ವಹಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.
ಬುಧವಾರ ನಗರದ ಕೇಂದ್ರ ಪರಿಹಾರ ಸಮಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಭವನ, ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರ ಬಗ್ಗೆ ಅಧ್ಯಯನ-ಸಂಶೋಧನೆ ನಡೆಸಿ ಅವರಿಗೆ ನ್ಯಾಯವನ್ನು ಕೊಡಿಸುವ ಉದ್ದೇಶದಿಂದ ಬಾಬು ಜಗಜೀವನ್ ರಾಂ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ಭವನ ನಿರ್ಮಿಸಲಾಗುತ್ತಿದೆ ಎಂದರು.ಜಗಜೀವನ ರಾಂ ಕೇಂದ್ರ ಸರಕಾರದದಲ್ಲಿ ನಿರ್ವಹಿಸದ ಖಾತೆಗಳಿಲ್ಲ. ಅವರೊಬ್ಬ ಅಪ್ರತಿಮ ನಾಯಕ, ಈ ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಡಿರುವ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಜವಾಬ್ಧಾರಿ ಎಂದು ಹೇಳಿದರು.
ಎಸ್ಸಿ-ಎಸ್ಟಿ ವರ್ಗದ ಜನರಿಗೆ ಶಕ್ತಿ ತುಂಬುವ ದೃಷ್ಟಿಯಿಂದ 5 ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ. 2013ರಿಂದ ಮೊತ್ತಮೊದಲ ಬಾರಿಗೆ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. 5 ವರ್ಷಗಳಲ್ಲಿ 84 ಸಾವಿರ ಕೋಟಿ ರೂ.ಅನುದಾನವನ್ನು ನೀಡಲಾಗಿದೆ ಎಂದರು.
ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ 1 ಕೋಟಿ ರೂ.ವರೆಗಿನ ಮೀಸಲಾತಿ ಕಲ್ಪಿಸಲಾಗಿದೆ. ಇಡಿ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ, 100 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಶಿಕ್ಷಣಕ್ಕಾಗಿ 800 ವಸತಿ ಶಾಲೆಗಳನ್ನು ತೆರೆಯಲಾಗಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆ ಇರಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.
ಲೋಕಸಭೆ ಮಾಜಿ ಸ್ಪೀಕರ್ ಮತ್ತು ಬಾಬು ಜಗಜೀವನರಾಂ ಅವರ ಪುತ್ರಿ ಮೀರಾಕುಮಾರಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ಸಮಾಜದ ಪ್ರತಿಯೊಬ್ಬರಿಗೂ ಸಮಾನ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಬೆಂಗಳೂರು ಇಂದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅಭಿವೃದ್ಧಿ ಎನ್ನವುದು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ತಲುಪಿದಾಗ ಮಾತ್ರ ಅದಕ್ಕೆ ಗೌರವ ಹೆಚ್ಚಾಗುವುದು. ಧರ್ಮ, ಜಾತಿ ಮೀರಿ ಪ್ರತಿ ನಾಗರಿಕನು ಈ ಸಮಾಜದ ಅವಿಭಾಜ್ಯ ಅಂಗ ಎನ್ನುವುದನ್ನು ಯಾವುದೇ ಸರಕಾರಗಳು ಮರೆಯಬಾರದು. ನನ್ನ ತಂದೆ ನನಗೆ ಪ್ರತಿ ಕ್ಷಣದಲ್ಲೂ ಮಾದರಿಯಾಗಿ ನಿಲ್ಲುತ್ತಾರೆ. ಅವರು ಕಲಿಸಿದ ಗುಣಗಳಿಂದ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ, ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರಕಾರ ನಿರ್ಮಿಸುತ್ತಿರುವ ಈ ಸಂಶೋದನೆ ಮತ್ತು ಅಧ್ಯಯನ ಭವನ ವೈಯಕ್ತಿಕವಾಗಿ ಖುಷಿ ತಂದಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಸುಮಾರು 80ಕೋಟಿ ರೂ.ವೆಚ್ಚದಲ್ಲಿ ಈ ಭವನವನ್ನು ಸ್ಥಾಪಿಸಲಾಗುತ್ತಿದ್ದು, ದೇಶದಲ್ಲಿಯೇ ಮಾದರಿ ಭವನವನ್ನು ನಿರ್ಮಿಸಲಾಗುತ್ತಿದೆ. ಮೈಸೂರು ಮಹಾರಾಜರು ಈ ಸ್ಥಳವನ್ನು ಸರಕಾರಕ್ಕೆ ನೀಡಿದ್ದಾರೆ ಎಂದು ಸ್ಮರಿಸಿದರು.
ನಮ್ಮ ಸರಕಾರ ಕೆಳವರ್ಗದ ಜನರು ಸ್ವಾಭಿಮಾನದ ಬದುಕಿಗಾಗಿ ಶ್ರಮಿಸುತ್ತಿದೆ, ಜಾತಿ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ವ್ಯಯಿಸಿದ ಮೊತ್ತಮೊದಲ ಸರಕಾರ ನಮ್ಮದು. ರಾಜ್ಯದ ಜನಪರ ಕಾರ್ಯಕ್ರಮಗಳು ದೇಶದ ಅನೇಕ ರಾಜ್ಯಗಳಿಗೆ ಮಾದರಿ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಕೆಳವರ್ಗದ ಎರಡು ಕಣ್ಣಿದ್ದಂತೆ, ಅವರ ಮಾರ್ಗದಲ್ಲಿ ನಡೆಯುತ್ತಿರುವ ನಮ್ಮ ಸರಕಾರ ಸಾಮಾಜಿಕ ನ್ಯಾಯದಡಿಯಲ್ಲಿ ದುರ್ಬಲ ವರ್ಗದವರಿಗೆ ಬಲ ನೀಡುವ ಕೆಲಸ ಮಾಡುತ್ತಿದೆ ಎಂದರು.
ಕೆಳವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದೃಷ್ಟಿಯಿಂದ ಹಾಸ್ಟೆಲ್ ಗಳ ಅಭಿವೃದ್ಧಿ ಮಾಡುವುದರ ಜೊತೆಯಲ್ಲಿ ಅನೇಕ ಹೊಸ ಹಾಸ್ಟೆಲ್ ಗಳನ್ನು ತೆರೆಯಲಾಗಿದೆ. ಬಾಬು ಜಗಜೀವನ ರಾಂ ಭವನ ಅತ್ಯುತ್ತಮ ಸಂಶೋದನ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದರು.
ಮಾಜಿ ಕೇಂದ್ರ ಸಚಿವ ಮುನಿಯಪ್ಪ ಮಾತನಾಡಿ, ಭಾರತದ ಇತಿಹಾಸದಲ್ಲಿ ಬಾಬು ಜಗಜೀವನರಾಂ ಅವರ ಕೊಡುಗೆ ಅಪಾರ, ಅಂಬೇಡ್ಕರ್ ಸಲ್ಲಿಸಿದ್ದ ಸಂವಿಧಾನ ಯಥಾವತ್ತಾಗಿ ಜಾರಿ ಮಾಡಲು ಶ್ರಮಿಸಿದವರು. ಅಂದಿನ ಅವರ ಶ್ರಮದ ಪ್ರತಿಫಲವನ್ನು ಸ್ಮರಿಸಿಕೊಳ್ಳಲು ರಾಜ್ಯ ಸರಕಾರ ಇಂದು ಅವರ ಹೆಸರಿನಲ್ಲಿ ಈ ಭವನವನ್ನು ನಿರ್ಮಿಸಲಾಗುತ್ತಿದೆ.
ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಅಭಿವೃದ್ಧಿಗಾಗಿ ಅತಿಹೆಚ್ಚು ಅನುದಾನ ನೀಡಿದ ಕೀರ್ತಿ ಕರ್ನಾಟಕ ಸರಕಾರಕ್ಕೆ ಸಲ್ಲುತ್ತದೆ. ಪಾರ್ಲಿಮೆಂಟಿನಲ್ಲಿಯೂ ಇದರ ಬಗ್ಗೆ ನಾನು ಪ್ರಸ್ತಾಪಿಸಿ ಕೇಂದ್ರ ಸರಕಾರಕ್ಕೆ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿದ್ದೇನೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಮುನಿರತ್ನ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಯರ್ ಸಂಪತ್ ರಾಜ್, ವಿಧಾನ ಪರಿಷತ್ ಸದಸ್ಯರಾದ ಉಗ್ರಪ್ಪ, ಧರ್ಮಸೇನ ಸೇರಿದಂತೆ ಅನೇಕ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.







