ಸಿದ್ದರಾಮಯ್ಯರ ಆರ್ಥಿಕ ನಿಲುವು ಬದಲಾಗಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಫೆ. 21: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ನಿಲುವು ಸಂಪೂರ್ಣ ಬದಲಾಗಿದ್ದು, ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ಅವರು ಸೋತಿದ್ದಾರೆ’ ಎಂದು ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಆರೋಪ ಮಾಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಆಯವ್ಯಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, 1996ರಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಸಾಲ ಮಾಡಿ ತುಪ್ಪ ತಿನ್ನಬಾರದು ಎಂದು ‘ಯೋಜನಾ ಗಾತ್ರ’ವನ್ನೇ ಕಡಿಮೆ ಮಾಡಿದ್ದರು. ಆದರೆ, ಇದೀಗ ಸಾಲ ಮಾಡಿ ಯೋಜನಾ ಗಾತ್ರ ಹೆಚ್ಚು ಮಾಡಿದ್ದಾರೆಂದು ವಿಶ್ಲೇಷಿಸಿದರು.
ಲೆಕ್ಕವಿಲ್ಲದಷ್ಟು ನಿಗಮ-ಮಂಡಳಿ ಸ್ಥಾಪನೆ, ದಾಖಲೆ ಪ್ರಮಾಣದಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡುವ ಮೂಲಕ ಅನುಪಯುಕ್ತ ವೆಚ್ಚವನ್ನು ಹೆಚ್ಚು ಮಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಕಾನೂನು ಬಾಹಿರವಾಗಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ ಎಂದು ಟೀಕಿಸಿದರು.
ಮೊದಲು ಶಿಕ್ಷೆ ಆಗಬೇಕು: ಎಸ್ಸಿ-ಎಸ್ಟಿ ವರ್ಗಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಿಂದಲೇ ಅನ್ಯಾಯವಾಗಿದೆ. ಹೀಗಾಗಿ ಮೊದಲು ಅವರಿಗೆ ಶಿಕ್ಷೆ ವಿಧಿಸಲು ಎಸ್ಸಿಪಿ-ಟಿಎಸ್ಪಿ ಕಾಯ್ದೆಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.







