ಹಿಂದೂ ತೀವ್ರವಾದಕ್ಕೆ ಪರೋಕ್ಷ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸರಕಾರ
ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೆ.ಪಿ. ರಾಮನುಣ್ಣಿ

ಹೊಸದಿಲ್ಲಿ, ಫೆ.21: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಹಿಂದೂ ತೀವ್ರವಾದಿಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಅವರನ್ನು ಬೆಂಬಲಿಸುತ್ತಿದೆ. ಹಾಗಾಗಿ ಅಲ್ಪಸಂಖ್ಯಾತರು ಈ ಸರಕಾರದಲ್ಲಿ ಸುರಕ್ಷಿತರಾಗಿಲ್ಲ ಎಂದು ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತರಾದ ಕೆ.ಪಿ ರಾಮನುಣ್ಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರವು ಹಿಂದೂ ತೀವ್ರವಾದಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರಕಾರ ಈ ವಿಷಯದಿಂದ ನುಣುಚಿಕೊಳ್ಳುತ್ತಿದೆ. ಆಮೂಲಕ ಹಿಂದೂ ತೀವ್ರವಾದಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಸಾಹಿತಿ ರಾಮನುಣ್ಣಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಜೊತೆ ತಮಗೆ ಸಿಕ್ಕಿದ ನಗದು ಬಹುಮಾನವನ್ನು ರೈಲಿನಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ 16ರ ಹರೆಯದ ಜುನೈದ್ ಖಾನ್ ತಾಯಿಗೆ ನೀಡುವ ಮೂಲಕ ರಾಮನುಣ್ಣಿ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಿದ್ದರು. ಪ್ರಶಸ್ತಿಯ ಜೊತೆ ಸಿಕ್ಕಿದ್ದ ನಗದಿನಲ್ಲಿ ಕೇವಲ ರೂ. 3ನ್ನು ತಮ್ಮ ಪಾಲಿಗೆ ಇರಿಸಿದ ರಾಮನುಣ್ಣಿ ಉಳಿದ ಒಂದು ಲಕ್ಷ ರೂ. ಅನ್ನು ಜುನೈದ್ ತಾಯಿಗೆ ನೀಡಿದ್ದರು.
ಕೋಮು ದ್ವೇಷ ಎಂಬುದು ಕ್ಯಾನ್ಸರ್ ಇದ್ದಂತೆ. ಒಂದು ಬಾರಿ ಅದು ಬಂತೆಂದರೆ ಅದನ್ನು ಗುಣಪಡಿಸುವುದು ಬಹಳ ಕಷ್ಟ ಎಂದು ಮಲಯಾಳಂ ಸಾಹಿತಿ ತಿಳಿಸಿದ್ದಾರೆ. ಜುನೈದ್‌ನನ್ನು ಆತ ಮುಸ್ಲಿಂ ಎಂಬ ಕಾರಣಕ್ಕೆ ಹತ್ಯೆ ಮಾಡಲಾಯಿತು ಮತ್ತು ಇದು ನೈಜ ಹಿಂದೂ ಸಂಸ್ಕೃತಿಗೇ ಅವಮಾನಕಾರಿಯಾಗಿದೆ ಎಂದು ರಾಮನುಣ್ಣಿ ಅಭಿಪ್ರಾಯಿಸಿದ್ದಾರೆ.







