ಮುಸ್ಲಿಂ,ದಲಿತ ಎಂಬ ಕಾರಣಕ್ಕೆ ಖಾನ್, ಜರ್ವಲ್ ವಿರುದ್ಧ ದೂರು: ಆಪ್

ಹೊಸದಿಲ್ಲಿ, ಫೆ.21: ದಿಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪಕ್ಷದ ಇಬ್ಬರು ಶಾಸಕರನ್ನು ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಆಮ್ ಆದ್ಮಿ ಪಕ್ಷ, ಅಮಾನತುಲ್ಲಾ ಖಾನ್ ಮತ್ತು ಪ್ರಕಾಶ್ ಜರ್ವಲ್ ಮುಸ್ಲಿಂ ಹಾಗೂ ದಲಿತರು ಎಂಬ ಕಾರಣಕ್ಕೆ ಅವರ ವಿರುದ್ಧ ಆರೋಪ ಮಾಡಲಾಗಿದೆ ಎಂದು ದೂರಿದೆ.
ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಆರೋಪವನ್ನು ನಿರಾಕರಿಸಿರುವ ಆಪ್ ನಾಯಕ ಆಶುತೋಷ್, ಅಧಿಕಾರಿಗಳಿಗೆ ಇನ್ನು ಕೂಡಾ ಖಾನ್ ಮತ್ತು ಜರ್ವಲ್ ವಿರುದ್ಧ ಯಾವುದೇ ಸಾಕ್ಷಿ ದೊರೆತಿಲ್ಲ. ಆದರೂ ಅವರಿಬ್ಬರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಪಕ್ಷದ ಬಗ್ಗೆ ಕೆಟ್ಟ ಭಾವನೆ ಮೂಡಲು ಮಾಡುತ್ತಿರುವ ಪಿತೂರಿ ಎಂದು ಅವರು ದೂರಿದ್ದಾರೆ.
ಸೋಮವಾರ ರಾತ್ರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಸಭೆ ಸೇರಿದ್ದ ವೇಳೆ ದಿಲ್ಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಇಮ್ರಾನ್ ಹುಸೈನ್ ಮತ್ತು ದಿಲ್ಲಿ ಸಂಭಾಷಣಾ ಆಯೋಗದ ಉಪಾಧ್ಯಕ್ಷ ಆಶಿಶ್ ಕೇತನ್ ಮೇಲೆ ದಿಲ್ಲಿ ಕಾರ್ಯದರ್ಶಿ ಕಚೇರಿಯಲ್ಲಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಿಡಿಯೊ ಸಾಕ್ಷಿ ಒದಗಿಸಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಪ್ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ತಮ್ಮ ಬಗ್ಗೆ ಅವಮಾನಕಾರಿ ಮತ್ತು ಜಾತಿ ಆಧಾರಿತ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ಜರ್ವಲ್ ಹಾಗೂ ಮತ್ತೊರ್ವ ಆಪ್ ಶಾಸಕ ಅಜಯ್ ದತ್ತ್ ಮಂಗಳವಾರದಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.







