‘ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಎನ್‌ಸಿಸಿಯಲ್ಲಿ ಸಕ್ರಿಯರಾಗಿಸಿ’
ಉಡುಪಿ, ಫೆ.21: ಜಿಲ್ಲೆಯಲ್ಲಿ ಸೇನೆಗೆ ಸೇರುವ ಯುವಜನತೆಯ ಸಂಖ್ಯೆ ಉಳಿದೆಡೆಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು, ಇದಕ್ಕಾಗಿ ಪ್ರೌಢಶಾಲೆ ಹಂತದಲ್ಲಿ ಎನ್‌ಸಿಸಿ ಚಟುವಟಿಕೆಯನ್ನು ಕಡ್ಡಾಯವಾಗಿ ಆರಂಭಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮೇಳೈಸುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ಹಾಲ್‌ನಲ್ಲಿ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದಕ್ಕಾಗಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ತಕ್ಷಣದಿಂದಲೇ ಎನ್‌ಸಿಸಿ ವಿಂಗ್‌ನ್ನು ಆರಂಭಿಸಿ. ಉಳಿದ ಶಾಲೆಗಳಲ್ಲಿ ಪಿಟಿ ಟೀಚರ್ ಅಥವಾ ಹಿಂದಿ ಟೀಚರ್‌ಗಳಿಗೆ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಎನ್‌ಸಿಸಿ ಸೇರ್ಪಡೆಗೆ ಪ್ರೋತ್ಸಾಹಿಸಿ. ತರಬೇತಿ ನೀಡಲು ನೌಕಾಪಡೆಯ ಸ್ಥಳೀಯ ಅಧಿಕಾರಿಗಳು ಸಿದ್ಧರಾಗಿದ್ದು, ವಿದ್ಯಾರ್ಥಿಗಳಲ್ಲಿ ಸೇನೆಗೆ ಸೇರ್ಪಡೆಗೊಳ್ಳಲು ನೆರವಾಗಿ ಎಂದರು.
ಕಾರ್ಯಕ್ರಮದಲ್ಲಿ ನೌಕಾಪಡೆಯ ಸ್ಥಳೀಯ ಅಧಿಕಾರಿ ವಿಶಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





