ಬಹರೈನ್: ಮಾನವಹಕ್ಕು ಹೋರಾಟಗಾರನಿಗೆ 5 ವರ್ಷ ಸಜೆ

ದುಬೈ, ಫೆ. 21: ತನ್ನ ದೇಶದ ಜೈಲುಗಳಲ್ಲಿ ಹಿಂಸೆ ನೀಡಲಾಗುತ್ತಿದೆ ಹಾಗೂ ಯಮನ್‌ನಲ್ಲಿ ಸೌದಿ ಅರೇಬಿಯ ನಡೆಸುತ್ತಿರುವ ಯುದ್ಧದಲ್ಲಿ ದುರ್ವರ್ತನೆ ತೋರಿಸಲಾಗುತ್ತಿದೆ ಎಂಬುದಾಗಿ ಟ್ವೀಟ್‌ಗಳನ್ನು ಮಾಡಿದ್ದ ಬಹರೈನ್‌ನ ಖ್ಯಾತ ಮಾನವಹಕ್ಕುಗಳ ಹೋರಾಟಗಾರ ನಬೀಲ್ ರಜಬ್‌ರಿಗೆ ಬುಧವಾರ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಅವರು ಈಗಾಗಲೇ, ಬಹರೈನ್ ಆಡಳಿತವನ್ನು ಟೀಕಿಸಿ ನೀಡಿರುವ ಟಿವಿ ಸಂದರ್ಶನಗಳಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷದ ಜುಲೈಯಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅವರ ಜೈಲು ವಾಸದ ಅವಧಿಯಲ್ಲಿ, ಹೃದಯದ ಕಾಯಿಲೆಗಳು ಮತ್ತು ಹೊಟ್ಟೆ ಹುಣ್ಣುಗಳಿಗಾಗಿ ಈಗಾಗಲೇ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಜಬ್ ‘ಉತ್ಸಾಹಭರಿತ ನಗು’ವಿನೊಂದಿಗೆ ನ್ಯಾಯಾಲಯವನ್ನು ಪ್ರವೇಶಿಸಿದ್ದಾರೆ ಎಂದು ಹೇಳುವ ಸಂದೇಶವೊಂದನ್ನು ಬುಧವಾರ ಅವರ ಟ್ವಿಟರ್ ಪುಟಕ್ಕೆ ಹಾಕಲಾಗಿತ್ತು. ನ್ಯಾಯಾಲಯ ತನ್ನ ತೀರ್ಪು ಘೋಷಿಸಿದ ಬಳಿಕ, ಅವರು ಶಾಂತಿಯ ಸೂಚನೆಯನ್ನು ವ್ಯಕ್ತಪಡಿಸುತ್ತಾ ಕೈಗಳನ್ನು ಮೇಲಕ್ಕೆತ್ತಿದರು ಹಾಗೂ ಮುಗುಳುನಕ್ಕರು.
2011ರ ‘ಅರಬ್ ಬಂಡಾಯ’ ಪ್ರತಿಭಟನೆಗಳನ್ನು ಬಹರೈನ್ ಹತ್ತಿಕ್ಕಿದ ಬಳಿಕ ರಜಬ್‌ರ ಕಷ್ಟದ ದಿನಗಳು ಆರಂಭವಾಗಿದ್ದವು.
ಪೊಲೀಸ್ ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಹುಟ್ಟುಹಾಕಿದ ಆರೋಪದಲ್ಲಿ 2012 ಆಗಸ್ಟ್‌ನಲ್ಲಿ ರಜಬ್‌ರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಎರಡು ವರ್ಷಗಳನ್ನು ಜೈಲಿನಲ್ಲಿ ಕಳೆದ ಬಳಿಕ, 2014ರ ಮೇ ತಿಂಗಳಲ್ಲಿ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು.
ಆದರೆ, ಟ್ವಿಟರ್‌ನಲ್ಲಿ ಸರಕಾರ ವಿರೋಧಿ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಅವರನ್ನು ಮತ್ತೆ ಬಂಧಿಸಲಾಯಿತು.







