ಕುಂದಾಪುರ: ರಾಜ್ಯ ಸರಕಾರದಿಂದ 165ರಲ್ಲಿ 159 ಪ್ರಣಾಳಿಕೆ ಭರವಸೆ ಈಡೇರಿಕೆ
ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್

ಕುಂದಾಪುರ, ಫೆ. 21: ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭೆ ಚುನಾವಣೆ ವೇಳೆ ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿ ಸಿದ 165ರಲ್ಲಿ 159 ಭರವಸೆಗಳನ್ನು ಈಡೇರಿಸುವ ಮೂಲಕ ಮಾದರಿ ಸಿಎಂ ಆಗಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಹೇಳಿದ್ದಾರೆ.
ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾಲೋಚನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತೈಲ ಬೆಲೆ ಪ್ರತಿ ದಿನ ಏರಿಕೆ ಯಾಗುತ್ತಿದೆ. ಉದ್ಯೋಗ ಸೃಷ್ಟಿಯಾಗದೇ ಯುವಕರು ಪಕೋಡಾ ಮಾರಾಟ ಮಾಡುವಂತಾಗಿದೆ. ಬ್ಯಾಂಕಿಗೆ ಕೋಟ್ಯಂತರ ರೂ. ವಂಚಿಸಿದ ನೀರವ್ ಮೋದಿಗೆ ಪ್ರಧಾನಿ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮುಂಬರುವ ಚುನಾವಣೆಯ ಗೆಲುವಿಗೆ ರಾಜ್ಯದಲ್ಲಿ ಪಕ್ಷದ 53 ಸಾವಿರ ಬೂತ್ ಸಮಿತಿಗಳನ್ನು ಸಂಘಟಿಸಲಾಗಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಅತೀ ಅಗತ್ಯ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಾಣಿಗೋಪಾಲ ಮಾತ ನಾಡಿ, ಎರಡೆರಡು ಬಾರಿ ಅವಧಿಗೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ. ಪದೇ ಪದೇ ರಾಜೀನಾಮೆ ನೀಡುವ ಶಾಸಕರು ನಮಗೆ ಬೇಕೇ ಎಂದು ಜನತೆ ನಿರ್ಧಾರ ಮಾಡಬೇಕು ಎಂದರು.
ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಜೇಕಬ್ ಡಿಸೋಜ, ತಿಮ್ಮಪ್ಪ ಪೂಜಾರಿ ಅವರನ್ನು ಕಾಂಗ್ರೆಸ್ ಪ್ರಚಾರ ಸಮಿತಿಗೆ ಆಯ್ಕೆ ಮಾಡಲಾಯಿತು. ರಾಜ್ಯ ಮುಖಂಡರಾದ ಜಿ.ಎಬಾವಾ, ಎಂ.ಎಸ್. ಮಹ ಮೂದ್, ಮಂಜುನಾಥ ಭಂಡಾರಿ, ಮಮತಾ ಗಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ರಾಜು ಪೂಜಾರಿ ಮಾತನಾಡಿದರು.
ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ಹೆರಿಯಣ್ಣ, ಕೆದೂರು ಸದಾನಂದ ಶೆಟ್ಟಿ, ದಿನೇಶ್ ಪುತ್ರನ್, ನರಸಿಂಹಮೂರ್ತಿ, ರೋಶನಿ ಒಲಿವೆರಾ, ನವೀನ್ ಡಿೞಸೋಜಾ, ಹಾರೂನ್ ಸಾಹೇಬ್, ಜ್ಯೋತಿ ಪುತ್ರನ್, ಚಂದ್ರಶೇಖರ ಶೆಟ್ಟಿ, ಮಮತಾ ಕಿಶೋರ್ ಶೆಟ್ಟಿ, ಇಚ್ಛಿತಾರ್ಥ ಶೆಟ್ಟಿ ಉಪಸ್ಥಿತರಿದ್ದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್ ಸ್ವಾಗತಿಸಿದರು. ನಾರಾಯಣ ಆಚಾರ್ ಕೋಣಿ ಕಾರ್ಯಕ್ರಮ ನಿರೂಪಿಸಿದರು.







