ಕೊಳ್ಳೇಗಾಲ: ಕಬ್ಬಿನ ತೋಟಕ್ಕೆ ಬೆಂಕಿ, ಲಕ್ಷಾಂತರ ರೂ, ನಷ್ಟ

ಕೊಳ್ಳೇಗಾಲ,ಫೆ.21: ವಿದ್ಯುತ್ ಸ್ವರ್ಶದಿಂದ ಕಬ್ಬಿಗೆ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಲಕ್ಷಾಂತರ ರೂ.ಬೆಲೆಯ ಕಬ್ಬು ಸುಟ್ಟುಹೋಗಿರುವ ಘಟನೆ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎಸ್.ಪುಟ್ಟರಾಜು ಎಂಬವರಿಗೆ ಸೇರಿದ 1.78 ಎಕರೆ ಜಮೀನಿನಲ್ಲಿ ಬೆಳೆದಿದ್ದ 1 ಎಕರೆ ಕಬ್ಬಿನ ಬೆಳೆಯು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಕಬ್ಬಿನ ಗದ್ದೆಯ ಮಧ್ಯೆದಲ್ಲಿರುವ ಅಳವಡಿಸಿರುವ ಟಿ.ಸಿ.ಯಿಂದ ಹೊರಬಂದ ಬೆಂಕಿಯಿಂದಾಗಿ 1.78 ಎಕರೆ ಭೂಮಿಯಲ್ಲಿ 1 ಎಕರೆಗೆ ಹಾಕಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟುಹೋಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ವಿಷಯ ತಿಳಿದು ಅಗ್ನಿಶಾಮಕದಳ ಶೀಘ್ರದಲ್ಲಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಜಮೀನಿನ ಮಧ್ಯೆದಲ್ಲಿರುವ ಟಿಸಿಯನ್ನು ಸ್ಥಳಾಂತರಿಸುವಂತೆ ಸುತ್ತಮುತ್ತಲ ಜಮೀನಿನವರ ಜೊತೆಗೂಡಿ ಚೆಸ್ಕಾಂ ಇಲಾಖೆಗೆ ಹಲವಾರು ಬಾರಿ ಲಿಖಿತ ಹಾಗೂ ನೇರವಾಗಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಇಂದಿನ ಅವಘಡಕ್ಕೆ ಕಾರಣ ಮತ್ತು ಈ ಹಿಂದೆ ಸುಟ್ಟ ಕಬ್ಬಿಗೆ ಪರಿಹಾರವನ್ನು ಕೂಡಾ ನೀಡಿಲ್ಲ ಎಂದು ಜಮೀನಿನ ಮಾಲೀಕರು ಆರೋಪಿಸಿದರು.





