ಮಾಲ್ದೀವ್ಸ್: ತುರ್ತು ಪರಿಸ್ಥಿತಿ 30 ದಿನ ವಿಸ್ತರಣೆ

ಮಾಲೆ (ಮಾಲ್ದೀವ್ಸ್), ಫೆ. 21: ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾಲ್ದೀವ್ಸ್‌ನಲ್ಲಿ ವಿಧಿಸಲಾಗಿರುವ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸರಕಾರ ಮಂಗಳವಾರ ಇನ್ನೂ 30 ದಿನಗಳಿಗೆ ವಿಸ್ತರಿಸಿದೆ.
ಇದಕ್ಕೂ ಮೊದಲು ಫೆಬ್ರವರಿ 5ರಂದು ಅಧ್ಯಕ್ಷ ಯಮೀನ್ ದೇಶದಲ್ಲಿ 15 ದಿನಗಳ ಅವಧಿಗೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಆಡಳಿತಾರೂಢ ಪ್ರೊಗ್ರೆಸಿವ್ ಪಾರ್ಟಿ ಆಫ್ ಮಾಲ್ದೀವ್ಸ್‌ನ 38 ಸಂಸದರು ಮಂಗಳವಾರ ತುರ್ತು ಪರಿಸ್ಥಿತಿ ವಿಸ್ತರಣೆಗೆ ಅನುಮೋದನೆ ನೀಡಿದರು.
ಮೊದಲ ಕಂತಿನ ತುರ್ತು ಪರಿಸ್ಥಿತಿ ಮಂಗಳವಾರ ಕೊನೆಗೊಳ್ಳುವ ಗಂಟೆಗಳ ಮೊದಲು ಹೊಸ ಅವಧಿಯ ತುರ್ತು ಪರಿಸ್ಥಿತಿಗೆ ಸಂಸತ್ತು ವಿವಾದಾತ್ಮಕವಾಗಿ ಅನುಮೋದನೆ ನೀಡಿತು.
ತುರ್ತು ಪರಿಸ್ಥಿತಿ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು 85 ಸದಸ್ಯ ಬಲದ ಸಂಸತ್ತಿನಲ್ಲಿ ಅರ್ಧದಷ್ಟು ಅಂದರೆ 43 ಸಂಸದರ ಉಪಸ್ಥಿತಿ ಅಗತ್ಯವಾಗಿತ್ತು. ಅಂದರೆ ಸಂಸತ್ತಿನಲ್ಲಿ ಕೋರಂ ಇರಲಿಲ್ಲ. ಆಡಳಿತ ಪಕ್ಷವು 38 ಸಂಸದರನ್ನು ಮಾತ್ರ ಹೊಂದಿದೆ. ಪ್ರತಿಪಕ್ಷಗಳ ಸಂಸದರು ಕಲಾಪವನ್ನು ಬಹಿಷ್ಕರಿಸಿದರು.
ಅಂತಿಮವಾಗಿ ಸ್ಪೀಕರ್ ಅಬ್ದುಲ್ಲಾ ಮಸೀಹ್ ಸಾಂವಿಧಾನಿಕ ಅಗತ್ಯವಾಗಿರುವ ಕೋರಂ ಪ್ರಕ್ರಿಯೆಯನ್ನು ಬದಿಗಿರಿಸಿ ಹಾಜರಿರುವ ಸದಸ್ಯರ ಮತದಾನಕ್ಕೆ ಅವಕಾಶ ನೀಡಿದರು.
ತುರ್ತು ಪರಿಸ್ಥಿತಿ ವಿಸ್ತರಣೆಯು ಅಕ್ರಮವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ಈ ಕ್ರಮವು ಸಂವಿಧಾನ ವಿರೋಧಿಯಾಗಿದೆ ಎಂದರು.
ಮಾಲ್ದೀವ್ಸ್ ಪರಿಸ್ಥಿತಿಯ ಬಗ್ಗೆ ವಿಶ್ವ ಸಮುದಾಯ ವ್ಯಕ್ತಪಡಿಸಿದ ಕಳವಳ ಹಾಗೂ ಪ್ರಜಾಪ್ರಭುತ್ವಕ್ಕೆ ಮರಳುವಂತೆ ನೀಡಿರುವ ಕರೆಗಳನ್ನು ಮಾಲ್ದೀವ್ಸ್‌ನ ಈ ಬೆಳವಣಿಗೆಯು ನಿರ್ಲಕ್ಷಿಸಿದೆ.
ಭಾರತದ ಕೆಂಗಣ್ಣು
ಮಾಲ್ದೀವ್ಸ್‌ನಲ್ಲಿ ನಡೆದಿರುವ ಬೆಳವಣಿಗೆಯು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಬಾರದು ಹಾಗೂ ಅಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಪುನಾರಂಭಗೊಳ್ಳಬೇಕು ಎಂಬುದಾಗಿ ಭಾರತ ಹೇಳಿತ್ತು.
ಹೊಸದಿಲ್ಲಿಯಲ್ಲಿ ಹೇಳಿಕೆಯೊಂದನ್ನು ನೀಡಿರುವ ವಿದೇಶ ವ್ಯವಹಾರಗಳ ಸಚಿವಾಲಯ, ಮಾಲ್ದೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆಯಾಗುವುದನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ.
ದೇಶದಲ್ಲಿ ನ್ಯಾಯಾಲಯ ಮುಂತಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂಬುದಾಗಿ ಹೇಳಿಕೆ ಕರೆ ನೀಡಿದೆ.







