ಕೆ.ಜೆ.ಪಿ 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ: ಪದ್ಮನಾಭ್ ಪ್ರಸನ್ನಕುಮಾರ್

ತುಮಕೂರು.ಫೆ.21: ಮುಂಬರುವ ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಾರ್ಟಿ(ಕೆಜೆಪಿ) ರಾಜ್ಯದ 224 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ಪಕ್ಷದ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆಯ ತಯಾರಿ ಹಿನ್ನೆಲೆಯಲ್ಲಿ ತುಮಕೂರು, ಹಾವೇರಿ ಮತ್ತು ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಹಲವರು ಹಿರಿಯ ಪ್ರಭಾವಿ ನಾಯಕರುಗಳ ಪಕ್ಷದ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸೇರಲಿದ್ದಾರೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಸೀಟುಗಳನ್ನು ಕೆ.ಜೆ.ಪಿ.ರಾಜ್ಯದಲ್ಲಿ ಗೆಲ್ಲಲಿದೆ ಎಂದರು.
ಬಿಜೆಪಿ ಪಕ್ಷದ ಪ್ರಮುಖ ನಾಯಕರಾಗಿರುವ ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವ ಬೆದರಿಕೆ ಇರುವುದು ನಿಜ. ಕೇರಳದ ಚೋಟನಕೆರೆ ಭಗವತಿ ದೇವಾಲಯದಲ್ಲಿ ಶೋಭಾ ಕರಂದ್ಲಾಜೆ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಸಿಡಿ ನನ್ನ ಬಳಿ ಇದೆ. ಇದನ್ನು ಬಿಡುಗಡೆ ಮಾಡಲು ಹೊರಟ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆ ನಡೆದಿವೆ. ನನ್ನ ಜೀವಕ್ಕೆ ಅಪಾಯವಿದೆ. ರಕ್ಷಣೆ ನೀಡಿ ಎಂದು ಈ ಹಿಂದಿನ ಗೃಹಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಜೀವಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಶೋಭಾ ಕರಂದ್ಲಾಜೆಯೇ ಕಾರಣ ಎಂದು ಪದ್ಮನಾಭ್ ಪ್ರಸನ್ನಕುಮಾರ್ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಗೂ ನನ್ನಗೆ ರಾಜಕೀಯ ಜನ್ಮ ನೀಡಿದ ತಂದೆ, ಜನರಿಗೆ ಗೊತ್ತಿಲ್ಲದ ಒಂದು ಪಕ್ಷವನ್ನು ಕೆಲವೇ ದಿನಗಳಲ್ಲಿ ಶೇ14.57ರಷ್ಟು ಮತ ಪಡೆಯುವಂತೆ ಮಾಡಿದವರು. ಇಂದು ಬಿ.ಎಸ್.ವೈ ಇಲ್ಲದಿದ್ದರೂ ಪಕ್ಷ ಅದೇ ವರ್ಚಸ್ಸನ್ನು ಉಳಿಸಿಕೊಂಡಿದೆ. ಈ ಬಾರಿ ಕೆ.ಜೆ.ಪಿ.ಹೊರತು ಪಡಿಸಿ ಸರಕಾರ ರಚಿಸಲು ಸಾಧ್ಯವೇ ಇಲ್ಲ ಎಂದ ಅವರು, ಇಂದಿಗೂ ಪಕ್ಷದೊಂದಿಗೆ 10 ಲಕ್ಷ ಸದಸ್ಯರು ಗುರುತಿಸಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಜೆ.ಪಿ.ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಬಾಬು, ರಾಜ್ಯ ಕಾರ್ಯದರ್ಶಿ ರವಿನಂದನ್, ತುಮಕೂರು ಜಿಲ್ಲಾ ಉಸ್ತುವಾರಿ ಶಂಕರಾನಂದ, ತುಮಕೂರು ಯುವ ಘಟಕದ ಅಧ್ಯಕ್ಷ ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.







