ಮಂಡ್ಯ: ಪುಟ್ಟಣ್ಣಯ್ಯಗೆ ಪ್ರಗತಿಪರ, ಕನ್ನಡ ಸಂಘಟನೆಗಳಿಂದ ಶ್ರದ್ಧಾಂಜಲಿ

ಮಂಡ್ಯ, ಫೆ.21: ಜಿಲ್ಲೆಯ ವಿವಿಧ ಪ್ರಗತಿಪರ ಮತ್ತು ಕನ್ನಡ ಸಂಘಟನೆಗಳಿಂದ ನಗರದ ಸಹ್ಯಾದ್ರಿ ಸಂಕೀರ್ಣದಲ್ಲಿ ರೈತ ನಾಯಕ, ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಶ್ರದ್ಧಾಂಜಲಿ ಸಭೆ ನಡೆಯಿತು.
ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ಮಾತನಾಡಿ, ನನ್ನಂತಹ ನೂರಾರು ಕಾರ್ಯಕರ್ತರಿಗೆ ಚಳವಳಿಯ ಶಕ್ತಿ ಮತ್ತು ಉತ್ಸಾಹವನ್ನು ತುಂಬಿದ ಪುಟ್ಟಣ್ಣಯ್ಯ ಅವರ ಅಗಲಿಕೆ ಅನಾಥ ಪ್ರಜ್ಞೆ ಮೂಡಿಸಿದೆ ಎಂದರು. ಚಳವಳಿಯ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಅವರು ಜೈಲಿನಲ್ಲಿ ಪರಿಚಯವಾದರು. ಅವರ ಹೋರಾಟ ಮತ್ತು ಸಿದ್ಧಾಂತಗಳನ್ನು ಒಪ್ಪಿ ನಾನು ರೈತ ಸಂಘಕ್ಕೆ ಸೇರಿದೆ. ಇಂತಹ ಮತ್ತೊಬ್ಬ ಪುಟ್ಟಣ್ಣಯ್ಯ ಹುಟ್ಟಲು ಸಾಧ್ಯವೇ ಎಂದು ಅವರು ನುಡಿದರು.
ಕಾವೇರಿ ಕಣಿವೆ ರೈತ ಒಕ್ಕೂಟದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಪುಟ್ಟಣ್ಣಯ್ಯ ಅವರು ರೈತಸಂಘ ಮತ್ತು ಕ್ಷೇತ್ರದ ಶಾಸಕತ್ವಕ್ಕೆ ಸೀಮಿತವಾಗದೆ, ಎಲ್ಲಾ ಜನಪರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಎಲ್ಲ ವರ್ಗದವರನ್ನೂ ಒಟ್ಟಿಗೆ ಕೊಂಡೊಯ್ಯುವ ಹೃದಯವಂತಿಕೆ ಅವರಲ್ಲಿತ್ತು ಎಂದು ಸ್ಮರಿಸಿದರು.
ಪುಟ್ಟಣ್ಣಯ್ಯ ಅವರು ಸಾಮಾಜಿಕ, ಸಾಂಸ್ಕೃತಿಕ ಮತ್ತು ರೈತಪರ ನಾಯಕರಾಗಿದ್ದರು. ಅಸಮಾನತೆ, ಜಾತೀಯತೆ, ಧರ್ಮಾಂಧತೆ ಮತ್ತು ಮಹಿಳಾ ಶೋಷಣೆ ವಿರುದ್ಧ ಸರಳ ಮತ್ತು ನವಿರಾದ ಹಾಸ್ಯದ ಮೂಲಕ ಜಾಗೃತಿಯ ಮೂಡಿಸಿ ಪರಿಹಾರವನ್ನೂ ಸೂಚಿಸುತ್ತಿದ್ದರು. ಅವರೊಬ್ಬ ರಾಜಕೀಯ ಸಂತರಾಗಿದ್ದರು ಎಂದು ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ವಿಶ್ಲೇಷಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಪುಟ್ಟಣ್ಣಯ್ಯ ರೈತ ಹೋರಾಟಗಳಿಗೆ ಸೀಮಿತವಾಗದೆ, ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ನಡೆಯುತ್ತಿದ್ದ ಚಳವಳಿಗಳಿಗೆ ಬೆನ್ನೆಲುಬಾಗಿದ್ದರು ಎಂದರು.
ಜಿಲ್ಲಾ ಕೇಂದ್ರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ಪ್ರತಿಮೆ ಸ್ಥಾಪಿಸುವಂತೆ ವಿಶ್ವಕರ್ಮ ಜಿಲ್ಲಾ ಸಂಘದ ಅಧ್ಯಕ್ಷ ಎಚ್.ಪಿ. ಸತೀಶ್ ಒತ್ತಾಯಿಸಿದರು.
ಜಿಲ್ಲಾ ಕುಂಬಾರರ ಜಾಗೃತ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಜಿಲ್ಲಾ ಭಜಂತ್ರಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್.ರಾಜಣ್ಣ, ಮಡಿವಾಳ ಸಮಾಜದ ಮುಖಂಡ ಸಿ.ಸಿದ್ದಶೆಟ್ಟಿ, ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಅರಸು ವೇದಿಕೆ ಆಟೋ ಘಟಕದ ಅಧ್ಯಕ್ಷ ಆನಂದ್, ರೈತಸಂಘದ ಲತಾ ಶಂಕರ್, ಕರವೇ ಕಲಾವಿದ ಪ್ರಕಾಶ್, ಶಶಿಧರ್ ಸಿಂಗ್, ಇತರರು ಹಾಜರಿದ್ದರು.







