ಪೂಲನ್ ದೇವಿ ಹತ್ಯೆ ಆರೋಪಿ ಜೊತೆ ಶಾಸಕನ ಪುತ್ರಿಯ ವಿವಾಹ

ಭೋಪಾಲ್, ಫೆ. 21: ಸಂಸತ್ತಿನ ಸಮಾಜವಾದಿ ಪಕ್ಷದ ಸದಸ್ಯೆ ಹಾಗೂ ಮಾಜಿ ಡಕಾಯಿತೆ ಪೂಲನ್ ದೇವಿ ಹತ್ಯೆ ಆರೋಪಿಯಾಗಿರುವ ಶೇರ್ ಸಿಂಗ್ ರಾಣಾ ಮಧ್ಯಪ್ರದೇಶದ ಶಾಸಕರ ಪುತ್ರಿಯೋರ್ವರನ್ನು ಉತ್ತರಾಖಂಡದ ರೂರ್ಕಿಯಲ್ಲಿ ಮಂಗಳವಾರ ವಿವಾಹವಾಗಿದ್ದಾರೆ. 41ರ ಹರೆಯದ ರಾಣಾ ಈಗ ಜಾಮೀನು ಮೇಲೆ ಹೊರಗಿದ್ದಾರೆ. ‘‘ನಾನು ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ಪ್ರಕರಣ ವಿಲೇವಾರಿಯಾಗಲು ಎಷ್ಟು ಸಮಯ ಬೇಕು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ.’’ ಎಂದು 32 ವರ್ಷದ ಪ್ರತಿಮಾ ಸಿಂಗ್ ಅವರನ್ನು ವಿವಾಹವಾದ ರಾಣಾ ಹೇಳಿದ್ದಾರೆ.
ನನ್ನ ಪತಿ ಮಧ್ಯಪ್ರದೇಶದ ಛಾತರ್‌ಪುರ ಜಿಲ್ಲೆಯಿಂದ 2008ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ರಾಣಾ ಅವರ ಅತ್ತೆ ಸಂಧ್ಯಾ ರಾಜೀವ್ ಬುಂದೇಲ ತಿಳಿಸಿದ್ದಾರೆ. ಪೂಲನ್ ದೇವಿ ಅವರನ್ನು 2001 ಜುಲೈ 25ರಂದು ಹೊಸದಿಲ್ಲಿ ಅವರ ನಿವಾಸದಲ್ಲಿ ಹತ್ಯೆಗೈದ ಹಿನ್ನೆಲೆಯಲ್ಲಿ ರಾಣಾ ಸುದ್ದಿಯಾಗಿದ್ದರು.
Next Story





