ತ್ರಿಕೋನ ಟ್ವೆಂಟಿ-20 ಸರಣಿ: ನ್ಯೂಝಿಲೆಂಡ್‌ಗೆ ಸೋಲುಣಿಸಿದ ಆಸ್ಟ್ರೇಲಿಯ

ಆಕ್ಲೆಂಡ್, ಫೆ.21: ಮಳೆ ಬಾಧಿತ ಟ್ವೆಂಟಿ-20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ಇಂದು ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯ 19 ರನ್‌ಗಳ ಜಯ ಗಳಿಸಿದ್ದು, ಐಸಿಸಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಂ.2ನೇ ಸ್ಥಾನಕ್ಕೇರಿದೆ.
ಏಡೆನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 151 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯದ ಬ್ಯಾಟಿಂಗ್‌ಗೆ ಮಳೆ ಅಡ್ಡಿಪಡಿಸಿತು. ಮಳೆಯಿಂದಾಗಿ ಆಟ ಸ್ಥಗಿತಗೊಂಡಾಗ ಆಸ್ಟ್ರೇಲಿಯ 14.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತ್ತು.
ಮಳೆಯಿಂದಾಗಿ ಆಟ ಮುಂದುವರಿಸಲು ಬಳಿಕ ಸಾಧ್ಯವಾಗಲಿಲ್ಲ. ಡಕ್‌ವರ್ಥ್ ಲೂಯಿಸ್ ನಿಯಮದಂತೆ ಆಸ್ಟ್ರೇಲಿಯದ ಗೆಲುವಿಗೆ 14.4 ಓವರ್‌ಗಳಲ್ಲಿ 103 ರನ್ ನಿಗದಿಪಡಿಸಲಾಯಿತು. ಆಸ್ಟ್ರೇಲಿಯ ನ್ಯೂಝಿಲೆಂಡ್ ವಿರುದ್ಧ 19 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಆಸ್ಟ್ರೇಲಿಯ ತಾನಾಡಿರುವ ಸರಣಿಯ ಎಲ್ಲ ಐದು ಪಂದ್ಯಗಳನ್ನು ಗೆದ್ದುಕೊಂಡು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಅರ್ಧಶತಕ ದಾಖಲಿಸಿದ ಅ್ಯಸ್ಟನ್ ಅಗರ್ ಪಂದ್ಯಶ್ರೇಷ್ಠ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲುವಿಗೆ 150 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯದ ಇನಿಂಗ್ಸ್ ಆರಂಭಿಸಿದ ನಾಯಕ ಡೇವಿಡ್ ವಾರ್ನರ್ ಮತ್ತು ಡಿ ಅರ್ಕಿ ಶಾರ್ಟ್ ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 72 ರನ್ ಸೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. 7ನೇ ಓವರ್‌ನ ಕೊನೆಯ ಎಸೆತದಲ್ಲಿ ಶಾರ್ಟ್ (50) ಅವರು ಮುನ್ರೊಗೆ ಕ್ಯಾಚ್ ನೀಡಿದರು. ಅವರು 30 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ದಾಖಲಿಸಿದರು.
ತಂಡದ ಸ್ಕೋರ್ 78ಕ್ಕೆ ತಲುಪುವಾಗ 25 ರನ್(23ಎ, 2ಬೌ) ಗಳಿಸಿದ್ದ ವಾರ್ನರ್ ಅವರು ಐಶ್ ಸೋಧಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ಸೇರಿದರು. ಆ್ಯಸ್ಟನ್ ಆಗರ್ (2) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯರೊನ್ ಫಿಂಚ್ ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 37 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಮ್ಯಾಕ್ಸ್‌ವೆಲ್ ಔಟಾಗದೆ 20ರನ್(18ಎ,1ಸಿ) ಮತ್ತು ಫಿಂಚ್ ಔಟಾಗದೆ 18 ರನ್(13ಎ,1ಸಿ) ಗಳಿಸಿ ಕ್ರೀಸ್‌ನಲ್ಲಿದ್ದರು.
ನ್ಯೂಝಿಲೆಂಡ್‌ನ ಸೋಧಿ, ಮಿಚೆಲ್ ಸ್ನಾಂಟ್ನೆರ್ ಮತ್ತು ಕಾಲಿನ್ ಮುನ್ರೊ ಅವರು ತಲಾ 1 ವಿಕೆಟ್ ಹಂಚಿಕೊಂಡರು.
ನ್ಯೂಝಿಲೆಂಡ್ 150/9: ಟಾಸ್ ಜಯಿಸಿದ್ದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿತ್ತು.
ನ್ಯೂಝಿಲೆಂಡ್ ತಂಡದ ನಾಯಕ ರಾಸ್ ಟೇಲರ್ ಅಜೇಯ 43 ರನ್ ಗಳಿಸಿದರು. ಇದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮುನ್ರೊ ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 48 ರನ್ ಗಳಿಸಿದರು. ಗಪ್ಟಿಲ್ 21ರನ್ ಮತ್ತು ಮುನ್ರೊ 29 ರನ್ ಗಳಿಸಿದರು.
ಗಪ್ಟಿಲ್ ಮತ್ತು ಮುನ್ರೊ ಅವರನ್ನು ಹೊರತುಪಡಿಸಿದರೆ ಆಸ್ಟ್ರೇಲಿಯದ ಸಂಘಟಿತ ದಾಳಿಯ ಮುಂದೆ ಕಾಲಿನ್ ಡಿ ಗ್ರಾಂಡ್‌ಹೊಮ್ಮೆ (10) ಮತ್ತು ಐಶ್ ಸೋಧಿ(13) ಮಾತ್ರ ಎರಡಂಕೆಯ ಸ್ಕೋರ್ ಜಮೆ ಮಾಡಿದರು.
ಆಸ್ಟ್ರೇಲಿಯದ ಅಗರ್ 27ಕ್ಕೆ 3 ವಿಕೆಟ್, ರಿಚರ್ಡ್ಸನ್ ಮತ್ತು ಆ್ಯಂಡ್ರೊ ಟೈ 30ಕ್ಕೆ 2 ವಿಕೆಟ್, ಬಿಲ್ಲಿ ಸ್ಟಾನ್‌ಲ್ಯಾಕ್ ಮತ್ತು ಮಾರ್ಕುಸ್ ಸ್ಟೋನಿಸ್ ತಲಾ 1 ವಿಕೆಟ್ ಹಂಚಿಕೊಂಡರು.
► ಗಾಯಾಳು ಕ್ರಿಸ್ ಲಿನ್ ಹೊರಕ್ಕೆ
ಆಕ್ಲೆಂಡ್, ಫೆ.21: ಆಸ್ಟ್ರೇಲಿಯದ ಪ್ರತಿಭಾವಂತ ಆಟಗಾರ ಕ್ರಿಸ್ ಲಿನ್ ಅವರು ನ್ಯೂಝಿಲೆಂಡ್ ವಿರುದ್ಧದ ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದಾಗ ಗಾಯಗೊಂಡು ಕ್ರೀಡಾಂಗಣದಿಂದ ಹೊರನಡೆದರು.
9ನೇ ಓವರ್‌ನಲ್ಲಿ ರಾಸ್ ಟೇಲರ್ ಬಾರಿಸಿದ ಚೆಂಡನ್ನು ಹಿಡಿಯಲು ಹೋಗಿ ಗಾಯಗೊಂಡರು. ಬಳಿಕ ಅವರು ಆಟ ಮುಂದುವರಿಸಲಾರದೆ ಹೊರಗುಳಿದರು. ಈ ಹಿಂದೆ ಲಿನ್ ಅವರ ಎಡ ಭುಜಕ್ಕೆ ಆಗಿರುವ ಗಾಯಕ್ಕೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಚೇತರಿಸಿಕೊಂಡಿದ್ದ ಲಿನ್‌ಗೆ ಮತ್ತೆ ಗಾಯದ ಸಮಸ್ಯೆ ಕಾಡಿದೆ.







