ಕುಸಿದು ಬಿದ್ದ ಕಿರಿಯನನ್ನು ಹೆಗಲ ಮೇಲೆ ಹೊತ್ತು 2.5 ಕಿ.ಮೀ. ಓಡಿದ ಎನ್ ಡಿಎ ಕ್ಯಾಡೆಟ್
ಇದಕ್ಕಾಗಿ ಇವರಿಗೆ ಸಿಕ್ಕ ಬಹುಮಾನವೇನು ಗೊತ್ತಾ?

ಹೊಸದಿಲ್ಲಿ, ಫೆ. 22: ಖಡಕ್‌ವಾಸ್ಲಾದಲ್ಲಿನ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕ್ರಾಸ್ ಕಂಟ್ರಿ ಓಟದ ಸಂದರ್ಭ ಪ್ರಜ್ಞಾಹೀನನಾದ ಕಿರಿಯ ಕ್ಯಾಡೆಟ್ ಒಬ್ಬನನ್ನು ಬೆನ್ನ ಹಿಂದೆ ಹೊತ್ತುಕೊಂಡು 2.5 ಕಿಮೀ ದೂರ ಸಾಗಿದ ಕ್ಯಾಡೆಟ್ ಒಬ್ಬರನ್ನು ನೋಡಿ ಆತನ ಬೆನ್ನ ತಟ್ಟಲೆಂದೇ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಕೆಲ ದಿನಗಳ ಹಿಂದೆ ಅಂಬಾಲದಿಂದ ಪುಣೆಗೆ ಆಗಮಿಸಿದ್ದರು.
ಈ ಹಿರಿಯ ಅಧಿಕಾರಿ - ಲೆಫ್ಟಿನೆಂಟ್ ಜನರಲ್ ಅಲೋಕ್ ಕ್ಲೇರ್ ಅವರು ತಮ್ಮ ರೇ-ಬ್ಯಾನ್ ಏವ್ಯೇಟರ್ ಸನ್ ಗ್ಲಾಸ್ ಅನ್ನೂ ಕ್ಯಾಡೆಟ್ ಗೆ ನೀಡಿ ಆತನ ಬಗ್ಗೆ ಅಭಿಮಾನದಿಂದ ಮಾತನಾಡಿದರು. ತಾನು ಮೂರು ದಶಕಗಳ ಹಿಂದೆ ಇದ್ದ ಅದೇ ಇಖೊ ಸ್ಕ್ವಾಡ್ರ್ಯನ್ ನಲ್ಲಿ ಕ್ಯಾಡೆಟ್ ಚಿರಾಗ್ ಅರೋರಾ ಕೂಡ ಇರುವುದು ಅಲೋಕ್ ಕ್ಲೇರ್ ಅವರಿಗೆ ಸಂತಸ ತಂದಿದೆ.

‘‘ಯಾರನ್ನೂ ಹಿಂದೆ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಸೇನೆಯ ನೀತಿಯಂತೆ ಆತ ಸರಿಯಾಗಿದ್ದನ್ನೇ ಮಾಡಿದ್ದಾನೆ’’ ಎಂದು ಕ್ಲೇರ್ ಹೇಳಿದರು.
ಫೆಬ್ರವರಿ 10ರಂದು ನಡೆದ ಕ್ರಾಸ್ ಕಂಟ್ರಿ ಓಟದ ಸಂದರ್ಭ ಕ್ಯಾಡೆಟ್ ಚಿರಾಗ್ ಅರೋರಾ ಅವರು ತಮ್ಮ ಜೂನಿಯರ್ ಒಬ್ಬ ಆಯಾಸದಿಂದ ಕುಸಿದು ಬಿದ್ದು ಓಟ ಪೂರ್ತಿಗೊಳಿಸುವ ಸಾಧ್ಯತೆ ಕಳೆದುಕೊಂಡಿದ್ದನ್ನು ಗಮನಿಸಿದ ಚಿರಾಗ್ ತಮ್ಮ ಓಟದ ಬಗ್ಗೆ ಚಿಂತಿಸದೆ ಆತನನ್ನೆತ್ತಿ ಬೆನ್ನಿನಲ್ಲಿ ಹೊತ್ತುಕೊಂಡು ತಮ್ಮ ಓಟ ಮುಗಿಸಿದ್ದರು.
ಅಕಾಡೆಮಿಯಲ್ಲಿ ಆರು ಟರ್ಮ್ ಅಥವಾ ಅವಧಿಗಳಿದ್ದು ಮೊದಲ ಟರ್ಮ್ ನವರನ್ನು ಹೊರತು ಪಡಿಸಿ ಉಳಿದೆಲ್ಲಾ ವಿಭಾಗದವರು ಕ್ರಾಸ್ ಕಂಟ್ರಿ ಓಟದಲ್ಲಿ ಭಾಗವಹಿಸಬೇಕಿದೆ.







