ವಿವೇಚನೆ ಎಂಬ ವಿಶೇಷ ಗುಣ ಮಾನವನಲ್ಲಿದ್ಲೆ : ಶ್ರೀಸಿದ್ದಲಿಂಗ ಸ್ವಾಮೀಜಿ

ತುಮಕೂರು,ಫೆ.22:ಮಾನವನಲ್ಲಿ ವಿವೇಚನೆ ಎಂಬ ವಿಶಿಷ್ಟವಾದ ಗುಣವಿದೆ. ಪ್ರಾಣಿಗಿಂತಲೂ ಭಿನ್ನವಾದ ಬದುಕು ಮಾನವನದು. ವಿವೇಚನೆ ಮಾಡುವ ಶಕ್ತಿ ಮಾನವನಲ್ಲಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಬಾಲಕರ ಕಾಲೇಜು ಆವರಣದಲ್ಲಿರುವ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಜ್ಞಾನ ಬುತ್ತಿ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಮಾನವನಲ್ಲಿರುವ ವಿವೇಚನಾ ಶಕ್ತಿಯಿಂದಲೇ ಇಡೀ ವಿಶ್ವ ಜ್ಞಾನವನ್ನು ಗೌರವಿಸುತ್ತದೆ. ಆದುದರಿಂದಲೇ ಜ್ಞಾನಕ್ಕೆ ಸಮಾನವಾದದ್ದು ಯಾವುದು ಇಲ್ಲ ಎಂದು ಹೇಳಿದರು.
ಜ್ಞಾನಬುತ್ತಿ ಸತ್ಸಂಗ ಎಂಬ ಹೆಸರೇ ವಿಶಿಷ್ಠವಾಗಿದೆ. ಮನುಷ್ಯನಿಗೆ ದೈಹಿಕವಾದ ಹಸಿವಾದಾಗ ಹೊಟ್ಟೆಗೆ ಬುತ್ತಿಬೇಕು. ಅದೇ ರೀತಿ ಮನುಷ್ಯನಿಗೆ ತಾನು ಬುದ್ಧಿವಂತನಾಗಿ ಸಮಾಜದಲ್ಲಿ ಬದುಕಲು ನೆತ್ತಿಯ ಬುತ್ತಿ ಬೇಕು.ಅದೇ ಜ್ಞಾನದ ಬುತ್ತಿ. ದೇಹದ ಹಸಿವು ಮತ್ತೆ ಮತ್ತೆ ಆಗುತ್ತದೆ. ಎಷ್ಟೇ ಆಹಾರ ತಿಂದರೂ ಅದು ಹೊಟ್ಟೆ ತುಂಬುತ್ತದೆ. ಆದರೆ ನೆತ್ತಿಯ ಅರ್ಥಾತ್ ಜ್ಞಾನದ ಬುತ್ತಿಯನ್ನು ಸಂಪೂರ್ಣವಾಗಿ ಸಮಾಧಾನಗೊಳಿಸಲು ಸಾಧ್ಯವಿಲ್ಲ.ಎಷ್ಟೇ ಕಲಿತರು ಇನ್ನೂ ಕಲಿಯುವುದು ಇದ್ದೇ ಇರುತ್ತದೆ. ಅದಕ್ಕಾಗಿಯೇ ಜ್ಞಾನಕ್ಕೆ ಬಹಳ ಮಹತ್ವವಿದೆ ಎಂದು ಸ್ವಾಮೀಜಿ ತಿಳಿಸಿದರು.
ಪ್ರತಿಯೊಬ್ಬ ಮನುಷ್ಯರು ಸಹ ತಮ್ಮ ಜೀವನವನ್ನು ಅರ್ಥ ಮಾಡಿಕೊಂಡು ಬದುಕು ಸಾಗಿಸಬೇಕು. ಪ್ರತಿಯೊಬ್ಬರಿಗೂ ಜ್ಞಾನವೇ ಅವರಿಗೆ ಒಡವೆಯಾಗಬೇಕು.ಕಳೆದು ಹೋದ ಆಯುಸ್ಸಿನಲ್ಲಿ ಬಹುತೇಕ ಕ್ಷಣಗಳನ್ನು ಪ್ರಯೋಜನವನ್ನಾಗಿ ಮಾಡಿಕೊಳ್ಳಬೇಕು ಒಳ್ಳೆಯ ಕೆಲಸಗಳಿಗೆ ಸಮಯವನ್ನು ಮೀಸಲಿಡಬೇಕು. ಸದಾಚಾರ ಸತ್ ವಿಚಾರ ಜ್ಞಾನಬುತ್ತಿ ಸತ್ಸಂಗದಲ್ಲಿ ನಡೆಯುತ್ತಿದೆ.ಜ್ಞಾನ ಎಲ್ಲಿರಗೂ ಸಿಗಬೇಕು ಎಂಬ ಕಾರಣಕ್ಕೆ ಪಿ.ಶಾಂತಿಲಾಲ್ ಅವರು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಪುಸ್ತಕವನ್ನು ಪ್ರಕಟಿಸಿ ಮೂರು ಸಾವಿರ ಕೃತಿಗಳನ್ನು ಉಚಿತವಾಗಿ ಹಂಚಿದ್ದಾರೆ. ಇದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ ಎಂದು ಪ್ರಶಂಸಿಸಿದರು.
ಜ್ಞಾನಬುತ್ತಿ ಸತ್ಸಂಗ ಸಂಸ್ಥಾಪಕ ಪಿ.ಶಾಂತಿಲಾಲ್ ಪ್ರಾಸ್ತಾವಿಕ ಮಾತನಾಡಿ, ಇದುವರೆಗೆ 450 ಕಾರ್ಯಕ್ರಮ ಮಾಡಿರುವುದು ಸಾಮಾನ್ಯವಾದ ಮಾತಲ್ಲ. ಇದರ ಹಿಂದೆ ಎಲ್ಲಾ ಜ್ಞಾನಾರ್ಥಿಗಳ ಶ್ರಮವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎನ್.ನಾಗಪ್ಪ ಮಾತನಾಡಿ,ಇತ್ತೀಚೆಗೆ ನಿಧನರಾದ ಹೋರಾಟಗಾರ ಕೆ.ಎಸ್. ಪುಟ್ಟಣ್ಣನವರ ಹೋರಾಟದ ಹಾದಿಯನ್ನು ಸ್ಮರಿಸಿದರು.ಪುಟ್ಟಣ್ಣಯ್ಯ ರೈತರು ಬಡವರ ಪರವಾಗಿ ಹೋರಾಟ ಮಾಡುತ್ತಿದ್ದರು ಎಂದು ಹೇಳಿದರು. ನನ್ನ ಅಧ್ಯಕ್ಷೀಯ ಮಾತುಗಳನ್ನು ಪುಟ್ಟಣ್ಣಯ್ಯನವರಿಗೆ ಅರ್ಪಿಸುವುದಾಗಿ ತಿಳಿಸಿದರು.
ಇದೇ ವೇಳೆ ಜ್ಞಾನಬುತ್ತಿ ಸತ್ಸಂಗದ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪದವಿ ಸ್ವೀಕರಿಸಿದರು.







