ಹನೂರು : ಕೆ.ಎಸ್ ಪುಟ್ಟಣ್ಣಯ್ಯಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶ್ರದ್ಧಾಂಜಲಿ

ಹನೂರು,ಫೆ.22 : ಇತ್ತೀಚೆಗೆ ನಿಧನ ಹೊಂದಿದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಹನೂರು ಸಮೀಪದ ಉದ್ದನೂರು ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಹನೂರು ಘಟಕಾಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ದಿ.ಪುಟ್ಟಣ್ಣಯ್ಯ ಅವರು ರೈತರ ಪಾಲಿಗೆ ಆಶಾಕಿರಣವಾಗಿದ್ದರು. ರೈತರ ಸಮಸ್ಯೆಗಳಿಗೆ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಧೀಮಂತ ನಾಯಕರು. ಇವರು ಜೀವಿತಾವಧಿಯಲ್ಲಿ ಸದಾ ರೈತಪರ ಹೋರಾಟಕ್ಕೆ ನಾಯಕತ್ವ ವಹಿಸಿ ರೈತರ ಸಮಸ್ಯೆಗಳಿಗೆ ದನಿಯಾಗಿದ್ದರು. ಇವರ ಅಕಾಲಿಕ ನಿಧನದಿಂದ ರೈತರಿಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿ.ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಜಡೇಸ್ವಾಮಿ, ಪದಾಧಿಕಾರಿಗಳಾದ ಶಿವರುದ್ರಸ್ವಾಮಿ, ಜಡೇಸ್ವಾಮಿ, ಲೋಕೇಶ್, ರಾಜಶೇಖರ್, ಸತೀಶ್ ನಾಗರಾಜು ಹಾಗೂ ಇನ್ನಿತರರಿದ್ದರು.





