ಫೆ.24ರಿಂದ ರಾಹುಲ್‌ಗಾಂಧಿ ರಾಜ್ಯ ಪ್ರವಾಸ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಫೆ.22: ವಿಧಾನಸಭಾ ಚುನಾವಣೆಯ ಪ್ರಚಾರದ ನಿಮಿತ್ತ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯ ಎರಡನೆ ಹಂತದ ಜನಾಶೀರ್ವಾದ ಯಾತ್ರೆಯು ಫೆ.24ರಿಂದ ಫೆ.26ರವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹುಬ್ಬಳಿಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್‌ಗಾಂಧಿಯವರ ಮೊದಲ ಹಂತದಲ್ಲಿ ಹೈ-ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿದ್ದರು. ಇದರಿಂದ ಆ ಭಾಗದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಅದೇ ರೀತಿಯಲ್ಲಿ ಮುಂಬೈ-ಕರ್ನಾಟಕ ಭಾಗದಲ್ಲಿರುವ ನಮ್ಮ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಎರಡನೆ ಹಂತದ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪ್ರವಾಸದ ವೇಳಾಪಟ್ಟಿ: ಫೆ.24ರಂದು ಬೆಳಗ್ಗೆ ಬೆಳಗಾವಿಗೆ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಅಥಣಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ವಿಜಯಪುರದ ತಿಕೊಟಾದ ಬಿಎಲ್‌ಡಿ ಮೈದಾನದಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಚಿಕ್ಕೋಡಿ, ವಿಜಯಪುರದ ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗೂ ಆ ಭಾಗದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿ, ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಅವರು ಹೇಳಿದರು.
ಫೆ.25ರಂದು ಬೆಳಗ್ಗೆ 9ಕ್ಕೆ ವಿಜಯಪುರದ ಯುವಕರು ನಡೆಸುವ ವೃಕ್ಷಸ್ಥಾನ್-2018 ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ನಂತರ ಜಮಖಂಡಿ ತಾಲೂಕು ಚಿಕ್ಕಪಡಸಲಗಿಯಲ್ಲಿ ನಿರ್ಮಾಣಗೊಂಡಿರುವ ನೀರು ತುಂಬಿಸುವ ಬ್ಯಾರೇಜ್‌ಗೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ. ಬಳಿಕ ವಿಜಯಪುರದ ಮಲ್ಲಿಕಾರ್ಜುನ ಹೈಸ್ಕೂಲ್ ಮೈದಾನದ ಸಭೆಯಲ್ಲಿ ಪಾಲ್ಗೊಂಡು ಮುಧೋಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಅವರು ತಿಳಿಸಿದರು.
ಫೆ.26ರಂದು ಬೆಳಗ್ಗೆ 9.20ಕ್ಕೆ ಬಾಗಲಕೋಟೆ, ಬೆಳಗಾವಿ ಬ್ಲಾಕ್ ಮುಖಂಡರು ಹಾಗೂ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಬೆಳಗಾವಿಯ ಚಿಂಚೋಳಿ ಮೈದಾನದಲ್ಲಿ ಸಭೆ ಹಾಗೂ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿಂದಲೇ ದೆಹಲಿಗೆ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.
ರಾಹುಲ್‌ಗಾಂಧಿಯ ಎರಡನೆ ಹಂತದ ಪ್ರವಾಸದಲ್ಲಿ ದೇವಸ್ಥಾನಗಳ ಭೇಟಿಯನ್ನು ಅಧಿಕೃತವಾಗಿ ನಿಗದಿಪಡಿಸಿಲ್ಲ. ಆದರೆ, ಸಾಗುವ ಮಾರ್ಗದಲ್ಲಿ ಐತಿಹಾಸಿಕ ದೇವಸ್ಥಾನಗಳು ಕಂಡುಬಂದರೆ ಭೇಟಿ ನೀಡುವ ಸಾಧ್ಯತೆಗಳಿವೆ. ಹಾಗೂ ಈ ಪ್ರವಾಸದಲ್ಲಿ ರಾಹುಲ್‌ಗಾಂಧಿ ಮಹಾದಾಯಿ ಸೇರಿದಂತೆ ನೀರಾವರಿ ವಿಷಯದ ಕುರಿತು ಮಾತನಾಡುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.







