ಕುಂಜತ್ತೂರು: ವಿದ್ಯಾರ್ಥಿಗಳ ಶಿಬಿರಕ್ಕೆ ಚಾಲನೆ

ಮಂಜೇಶ್ವರ, ಫೆ. 22: ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 'ಸ್ಮಾರ್ಟ್ ಫೋರ್ಟಿ ಕ್ಯಾಂಪ್' ಎಂಬ ಹೆಸರಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
ಗುರುವಾರ ಸಂಜೆ 4 ಗಂಟೆಗೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯು ಎಚ್ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರಕ್ಕೆ ಕಾಸರಗೋಡು ಜಿಲ್ಲಾ. ಪಂ. ಸ್ಥಾyi ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಹಾಗೂ ದಾರಿ ತಪ್ಪುವ ವಿದ್ಯಾರ್ಥಿಗಳನ್ನು ಸರಿ ದಾರಿಗೆ ತರಲು ಇಂತಹ ಶಿಬಿರಗಳು ಸಹಾಯಕವಾಗಲಿದೆ. ಶಿಕ್ಷಕರ ಜೊತೆಯಾಗಿ ಪೋಷಕರು ಕೈ ಜೋಡಿಸಿದರೆ ಉತ್ತಮ ಫಲಿತಾಂಶ ದೊರಕಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭ ವೇದಿಕೆಯಲ್ಲಿ ವಿದ್ಯಾಧಿಕಾರಿ ವಿ ದಿನೇಶ, ಮುಖ್ಯೋಪಧ್ಯಾಯ ಅಗಸ್ಟಿನ್ ಬರ್ನಾಡ್, ಉಪಾಧ್ಯಕ್ಷ ಅಬ್ದುಲ್ ಖಾದರ್, ಅನಿತಾ ಪಿ ಜಿ ಸೇರಿದಂತೆ ಹಲವರು ಉಪಸ್ಥರಿದ್ದರು.
40 ಮಕ್ಕಳು ಪಾಲ್ಗೊಳ್ಳುವ ಈ ಶಿಬಿರವು ಹಗಲು, ರಾತ್ರಿಗಳಲ್ಲಾಗಿ ಮೂರು ದಿನ ನಡೆಯಲಿದೆ. ಚೈಲ್ಡ್ ಪ್ರೊಟೆಕ್ಷನ್ ತಂಡ, ಶಿಕ್ಷಣ ಇಲಾಖೆ, ಪೊಲೀಸ್, ಆರೋಗ್ಯ, ಪಂಚಾಯತುಗಳು ಜಂಟಿಯಾಗಿ ಈ ಶಿಬಿರಕ್ಕೆ ಸಹಕಾರವನ್ನು ನೀಡಿದೆ.







