ದೇರಳಕಟ್ಟೆ: ನಿಟ್ಟೆ ವಿವಿಯಲ್ಲಿ ಎನ್‌ಐ-ವ್ಯಾಟ್- ಮಂಗಳೂರು- 2018 ಕಾರ್ಯಾಗಾರ

ಉಳ್ಳಾಲ, ಫೆ. 22: ಗಂಟಲು ಕ್ಯಾನ್ಸರಿನ ಶುಶ್ರೂಷೆಯಲ್ಲಿ ವೈದ್ಯಕೀಯ ಕ್ಷೇತ್ರ ಬಹಳಷ್ಟು ಸಾಧಿಸಿದ್ದು ಅದಕ್ಕಾಗಿ ಆಧುನಿಕ ಚಿಕಿತ್ಸಾ ವಿಧಾನಗಳಿಂದ ರೋಗಿ ಗಳ ಆರೈಕೆ ಸರಳವಾಗುತ್ತಾ ಮುಂದುವರಿದಿದೆ ಎಂದು ದೇರಳಕಟ್ಟೆಯ ನಿಟ್ಟೆ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ದೇರಳಕಟ್ಟೆಯ ಕೆ. ಎಸ್. ಆಡಿಟೋರಿಯಂನಲ್ಲಿ ನವದೆಹಲಿಯ ರಿಹ್ಯಾಬಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಿಟ್ಟೆ ವಿವಿ ವಾಕ್ ಶ್ರವಣ ವಿಭಾಗದ ಆಶ್ರಯದಲ್ಲಿ ಗುರುವಾರ ನಡೆದ ಎನ್‌ಐ-ವ್ಯಾಟ್- ಮಂಗಳೂರು- 2018 ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ದಶಕಗಳ ಹಿಂದೆ ಗಂಟಲು ಕ್ಯಾನ್ಸರ್ ಹೊಂದಿದವರ ಚಿಕಿತ್ಸೆ ತ್ರಾಸದಾಯಕಗಿತ್ತು. ಕ್ರಮೇಣ ರೋಗಶಾಸ್ತ್ರಜ್ಞರು, ಅರಿವಳಿಕೆ ತಜ್ಞರ ಆರಂಭದಿಂದ ಗಂಟಲು ರೋಗಿಗಳ ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆ ಕಂಡಿತ್ತು. ರೋಗಿಗಳಿಗೆ ಪುನರ್ವಸತಿ ನೀಡುವ ಸಲುವಾಗಿ ಲೆರಿಂಗಾಕ್ಟಮಿ ಕ್ಲಬ್‌ನ ಆರಂಭ ವಾಯಿತು. ನಿಟ್ಟೆ ವಿ.ವಿ. ಪ್ರತಿವರ್ಷ ಕೂಡಾ ಗಂಟಲು ಸಂಬಂಧಿ ಚಿಕಿತ್ಸೆಗಳ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಆ ಮೂಲಕ ನುರಿತ ವೈದ್ಯರು ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯವಾಗಿದೆ ಎಂದರು.
ನಿಟ್ಟೆ ವಿವಿ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ಮಾತನಾಡಿ ಸ್ವರ ಕಳೆದುಕೊಂಡರೆ ವ್ಯಕ್ತಿ ವ್ಯಕ್ತಿತ್ವವನ್ನು ಕಳೆದು ಕೊಂಡಂತೆ. ವಿಚಾರಕ್ಕಿಂತ ಸ್ವರದ ಕಂಪನ ಹಾಗೂ ಮಾತನಾಡುವ ಸ್ವರ ಮುಖ್ಯವಾಗಿರುತ್ತದೆ. ಸ್ವರ ರಕ್ಷಿಸುವ ಮತ್ತು ಸುಧಾರಣೆಗೊಳಿಸುವ ತರಬೇತಿಗಳು ಶಾಲಾ ಕಾಲೇಜುಗಳಲ್ಲಿ ನಡೆಯಬೇಕಿದೆ ಎಂದರು.
ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿಯಂತಹ ವ್ಯಕ್ತಿಗಳು ಅಮೆರಿಕನ್ನರೆ ಅಮೇರಿಕಾಕ್ಕೆ ನಿಮ್ಮ ಕೊಡುಗೆ ಏನು ಎಂಬಂತಹ ವಿಷಯಗಳು ಜನಮನದಲ್ಲಿ ತರಂಗಗಳಂತೆ ಪ್ರತಿಧನಿಸುತ್ತಿದ್ದವು. ಅವರ ಮಾತುಗಾರಿಕೆ ಅಷ್ಟೊಂದು ಪ್ರಖರವಾಗಿರುತ್ತಿದವು. ಹಾಗೆಯೇ ರೋಗಿಯ ಮುಂದೆ ವೈದ್ಯರು ಆಡುವ ಮಾತು ಗಳು ರೋಗಿಗೆ ಹೊಸ ಜೀವನ ಹೊಸ ಬದುಕು ಕೊಡುವಂತೆ ಮಾಡಬೇಕು ಎಂದು ನುಡಿದರು.
ಕಾರ್ಯಗಾರದಲ್ಲಿ ಕ್ಷೇಮ ಡೀನ್ ಡಾ. ಪಿ. ಎಸ್. ಪ್ರಕಾಶ್, ಪ್ರೊ. ಟಿ. ದತ್ತಾತ್ರೇಯ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶ್ವೇತಾ ಸ್ವಾಗತಿಸಿದರು. ಕಾಲಿಟಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರ ಸಂಘಟನಾ ಕಾರ್ಯದರ್ಶಿ ತೇಜಸ್ವಿ ದೊಡ್ಡೇರಿ ವಂದಿಸಿದರು.







