ವಿಶ್ವಕಪ್ ನಲ್ಲಿ ಮಿಂಚಿದ್ದ ಈ ಮಹಿಳಾ ಕ್ರಿಕೆಟರ್ ಈಗ ಡಿಎಸ್‌ಪಿ

ಚಂಡೀಗಡ, ಫೆ.22: ಕಾನೂನಿನ ತೊಡಕಿನಿಂದ ಅತ್ತ ರೈಲ್ವೇಯಲ್ಲಿ ಹೊಂದಿದ್ದ ಹುದ್ದೆಯನ್ನೂ ಉಳಿಸಿಕೊಳ್ಳಲಾಗದೆ, ಇತ್ತ ಪಂಜಾಬ್ ಸರಕಾರ ಘೋಷಿಸಿದ ಹುದ್ದೆಯನ್ನೂ ಪಡೆಯಲಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಭಾರತದ ಮಹಿಳಾ ಟಿ-20 ಕ್ರಿಕೆಟ್‌ನ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಡೆಗೂ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ಪಡೆದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಅವರ ಸತತ ಪ್ರಯತ್ನದಿಂದ ಕಾನೂನು ತೊಡಕನ್ನು ನಿವಾರಿಸಿಕೊಂಡು ತಮ್ಮ ತವರು ರಾಜ್ಯದಲ್ಲೇ ಸರಕಾರಿ ನೌಕರಿ ಪಡೆದಿರುವುದರಿಂದ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿರುವ ಹರ್ಮನ್‌ಪ್ರೀತ್, ಅಮರಿಂದರ್ ಸಿಂಗ್ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯೆಲ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಇಂಗ್ಲೆಂಡಿನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪಂಜಾಬ್ ಮೂಲದ ಕೌರ್ ಭಾರತ ಫೈನಲ್ ಪ್ರವೇಶಿಸಲು ಕಾರಣರಾಗಿದ್ದರು . ಈ ಹಿನ್ನೆಲೆಯಲ್ಲಿ ಅವರಿಗೆ ಪಂಜಾಬ್ ಸರಕಾರ ಕಳೆದ ಜುಲೈ ತಿಂಗಳಿನಲ್ಲಿ ಡಿಎಸ್‌ಪಿ ಹುದ್ದೆಯ ಕೊಡುಗೆ ನೀಡಿತ್ತು. ಅದನ್ನು ಸ್ವೀಕರಿಸಿದ್ದ ಕೌರ್, ತಾನು ರೈಲ್ವೇ ಇಲಾಖೆಯಲ್ಲಿ ಹೊಂದಿದ್ದ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಆದರೆ ರೈಲ್ವೇ ಇಲಾಖೆಯ ಹುದ್ದೆಗೆ ಸೇರ್ಪಡೆಯಾಗುವ ಸಂದರ್ಭ ಕೌರ್ ಐದು ವರ್ಷಗಳ ಬಾಂಡ್ ಬರೆದುಕೊಟ್ಟಿದ್ದರು. ಮೂರು ವರ್ಷದಲ್ಲೇ ಅವರು ಹುದ್ದೆ ತೊರೆಯಲು ಸಾಧ್ಯವಿಲ್ಲ. ಹಾಗೊಂದು ವೇಳೆ ರಾಜೀನಾಮೆಯನ್ನು ಅಂಗೀಕರಿಸಬೇಕಿದ್ದರೆ ಕೌರ್ ಐದು ವರ್ಷದ ವೇತನವನ್ನು ಇಲಾಖೆಗೆ ಪಾವತಿಸಬೇಕು ಎಂದು ರೈಲ್ವೇ ಇಲಾಖೆ ಸೂಚಿಸಿತ್ತು.
ಆ ಬಳಿಕ ಕೌರ್‌ಗೆ ರೈಲ್ವೇ ಇಲಾಖೆಯಿಂದಲೂ ಸಂಬಳ ಸಿಗದೆ, ಪಂಜಾಬ್ ಸರಕಾರದ ಕೆಲಸವೂ ಸಿಗದೆ ಅವರು ನಿರುದ್ಯೋಗಿಯಾಗಿದ್ದರು.
ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಈ ವಿಷಯದ ಬಗ್ಗೆ ರೈಲ್ವೇ ಇಲಾಖೆ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಜೊತೆ ಹಲವು ಬಾರಿ ಚರ್ಚಿಸಿದ್ದರು. ಹರ್ಮನ್‌ಪ್ರೀತ್ ಕೌರ್ ಅವರ ಪ್ರಕರಣ ವಿಭಿನ್ನವಾಗಿದೆ. ಅವರು ಸರಕಾರಿ ಉದ್ಯೋಗ ಬಿಟ್ಟು ಖಾಸಗಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳುತ್ತಿಲ್ಲ. ಕೇಂದ್ರ ಸರಕಾರದ ಹುದ್ದೆ ತೊರೆದು ಸ್ವಂತ ರಾಜ್ಯದ ಕರ್ತವ್ಯಕ್ಕೆ ಸೇರಲು ಬಯಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಬಾಂಡ್‌ನ ಷರತ್ತುಗಳು ಅನ್ವಯವಾಗುವುದಿಲ್ಲ. ಒಂದು ವೇಳೆ ಅವರಿಗೆ ಅವಕಾಶ ನಿರಾಕರಿಸಿದರೆ ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಿದ ಕ್ರೀಡಾಳುವನ್ನು ಪುರಸ್ಕರಿಸುವ ಬದಲು ಶಿಕ್ಷಿಸಿದಂತಾಗುತ್ತದೆ ಎಂದು ಅಮರಿಂದರ್ ಸಿಂಗ್ ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದರು.
ಇದೀಗ ಹರ್ಮನ್‌ಪ್ರೀತ್ ಪಂಜಾಬ್ ಡಿಎಸ್‌ಪಿ ಹುದ್ದೆ ಸೇರಲು ರೈಲ್ವೇ ಇಲಾಖೆ ಅವಕಾಶ ಮಾಡಿಕೊಟ್ಟಿದೆ.







