ಸಾಲ ವಸೂಲಿಗೆ ಎಲ್ಲಾ ಕಾನೂನುಕ್ರಮ ಕೈಗೊಳ್ಳುತ್ತೇವೆ : ನೀರವ್ ಮೋದಿಗೆ ಪಿಎನ್‌ಬಿ ಪ್ರತಿಕ್ರಿಯೆ

ಹೊಸದಿಲ್ಲಿ, ಫೆ.22: ಸಾರ್ವಜನಿಕವಾಗಿ ಸಾಲದ ಕುರಿತು ಹೇಳಿಕೆ ನೀಡುವ ಮೂಲಕ ಸಾಲ ಮರುಪಾವತಿಯ ಎಲ್ಲಾ ಸಾಧ್ಯತೆಗಳನ್ನೂ ಪಿಎನ್‌ಬಿ ಬ್ಯಾಂಕ್ ಮುಚ್ಚಿದೆ ಎಂಬ ನೀರವ್ ಮೋದಿಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಿಎನ್‌ಬಿ ಬ್ಯಾಂಕ್, ಸಾಲ ವಸೂಲಾತಿಗೆ ಸಾಧ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ನಮಗೆ ಬರಬೇಕಿರುವ ಸಾಲವನ್ನು ಕಾನೂನಿನ ಪ್ರಕಾರ ವಸೂಲು ಮಾಡಲು ಲಭ್ಯವಿರುವ ಎಲ್ಲಾ ಕ್ರಮಗಳನ್ನೂ ಜರಗಿಸಲಾಗುವುದು ಎಂದು ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿರುವ ಸ್ಪಷ್ಟನೆಯಲ್ಲಿ ಬ್ಯಾಂಕ್ ತಿಳಿಸಿದೆ. ಅಲ್ಲದೆ ನೀರವ್‌ಮೋದಿಗೆ ಬರೆದಿರುವ ಪ್ರತ್ಯೇಕ ಪತ್ರದಲ್ಲಿ, ಸಾಲ ಮರುಪಾವತಿ ಮಾಡುವ ಬಗ್ಗೆ ವಾಸ್ತವಿಕ ಹಾಗೂ ಅನುಷ್ಠಾನಸಾಧ್ಯ ಯೋಜನೆ ನಿಮ್ಮಲ್ಲಿದ್ದರೆ ಆ ಬಗ್ಗೆ ತಿಳಿಸಿ ಎಂದು ಸೂಚಿಸಿದೆ.
ಈ ಮಧ್ಯೆ, ಮೋದಿಗೆ ಮತ್ತೊಂದು ಪತ್ರ ಬರೆದಿರುವ ಪಿಎನ್‌ಬಿಯ ಅಂತರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ವತ್ಸ್, ಮೋದಿ ಒಡೆತನದ ಸಂಸ್ಥೆಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮ) ಉಲ್ಲಂಘಿಸಿ ಅಕ್ರಮವಾಗಿ ವಾಗ್ದಾನ ಪತ್ರಗಳನ್ನು ಪಡೆದಿವೆ ಎಂದು ಹೇಳಿದ್ದಾರೆ. ‘ಕೆಲವು ಬ್ಯಾಂಕ್ ಅಧಿಕಾರಿಗಳಿಂದ ಅಕ್ರಮವಾಗಿ ಹಾಗೂ ಅನಧಿಕೃತ ರೀತಿಯಲ್ಲಿ ವಾಗ್ದಾನ(ಮುಚ್ಚಳಿಕೆ) ಪತ್ರವನ್ನು ನೀವು ಪಡೆದಿದ್ದೀರಿ. ಇಂತಹ ವ್ಯವಸ್ಥೆಯನ್ನು ನಿಮ್ಮ ಸಂಸ್ಥೆಗಳಿಗೆ ಬ್ಯಾಂಕ್ ನೀಡಿಲ್ಲ. ಈ ಅಕ್ರಮ ಚಟುವಟಿಕೆಗಳ ಮಾಹಿತಿ ದೊರೆತ ತಕ್ಷಣ , ‘ಫೆಮ’ ಕಾಯ್ದೆ ಉಲ್ಲಂಘಿಸಿರುವ ಕುರಿತು ಸಂಬಂಧಿತ ಅಧಿಕಾರಿ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದು ಬ್ಯಾಂಕಿನ ಕರ್ತವ್ಯವಾಗಿದೆ ಮತ್ತು ಬ್ಯಾಂಕ್ ತನ್ನ ಕರ್ತವ್ಯ ನಿಭಾಯಿಸಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಸಾಲ ಮರುಪಾವತಿಯ ಬಗ್ಗೆ ನೀರವ್ ಮೋದಿಯಿಂದ ಕೆಲವು ಅಸ್ಪಷ್ಟ ಆಶ್ವಾಸನೆ ದೊರೆತಿದೆ ಎಂದು ಕಳೆದ ಗುರುವಾರ ಪಿಎನ್‌ಬಿಯ ಉನ್ನತ ಆಡಳಿತ ಮಂಡಳಿ ತಿಳಿಸಿತ್ತು. ಮೋದಿ ವೈಯಕ್ತಿಕವಾಗಿ ತಮ್ಮಿಂದಿಗೆ ಮಾತನಾಡಿಲ್ಲ. ಅವರು ಪ್ರಸ್ತಾವಿಸಿರುವ ಮರುಪಾವತಿ ಯೋಜನೆಯ ಕುರಿತು ಲಿಖಿತವಾಗಿ ತಿಳಿಸಿದಲ್ಲಿ ಇದರಲ್ಲಿ ವಾಸ್ತವಿಕ ಅಂಶಗಳಿವೆಯೇ ಎಂಬ ಕುರಿತು ಪರಿಶೀಲಿಸುವುದಾಗಿ ಪಿಎನ್‌ಬಿಯ ಆಡಳಿತ ನಿರ್ದೇಶಕ ಹಾಗೂ ಸಿಇಒ ಸುನಿಲ್ ಮೆಹ್ತಾ ತಿಳಿಸಿದ್ದರು.
ತಾನು ಸಾಲದ ಮರುಪಾವತಿಯ ಪ್ರಸ್ತಾವ ಮಾಡಿದ್ದರೂ, ಸಾಲವನ್ನು ತಕ್ಷಣ ಹಿಂಪಡೆಯಲು ಬ್ಯಾಂಕ್ ತೋರಿದ ಆತುರದ ವರ್ತನೆ ತನ್ನ ಉದ್ಯಮವನ್ನು ನಾಶಮಾಡಿದೆ ಹಾಗೂ ಸಂದಾಯವಾಗಬೇಕಿರುವ ಸಾಲವನ್ನು ವಸೂಲು ಮಾಡುವಲ್ಲಿ ಬ್ಯಾಂಕ್ ಹೊಂದಿರುವ ಅಧಿಕಾರವನ್ನು ಸೀಮಿತಗೊಳಿಸಿದೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದರು.







