ದಿಲ್ಲಿ : ಹಲ್ಲೆ ಘಟನೆ ಖಂಡಿಸಿ 5 ನಿಮಿಷ ಮೌನಾಚರಣೆಗೆ ಸರಕಾರಿ ಸಿಬ್ಬಂದಿಗಳ ನಿರ್ಧಾರ

ಹೊಸದಿಲ್ಲಿ, ಫೆ.22: ತಮ್ಮ ಸುರಕ್ಷತೆ ಹಾಗೂ ಗೌರವವನ್ನು ಖಾತ್ರಿ ಪಡಿಸಲು ಸರಕಾರ ಕ್ರಮ ಕೈಗೊಳ್ಳುವವರೆಗೆ ಪ್ರತೀ ಕೆಲಸದ ದಿನ ತಮ್ಮ ಕಚೇರಿಯ ಹೊರಗಡೆ ಐದು ನಿಮಿಷ ಮೌನಾಚರಣೆ ನಡೆಸಲು ದಿಲ್ಲಿಯ ಸರಕಾರಿ ಸಿಬ್ಬಂದಿಗಳು ನಿರ್ಧರಿಸಿದ್ದಾರೆ ಎಂದು ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್)ಯ ಉದ್ಯೋಗಿಗಳ ಸಂಘಟನೆ ತಿಳಿಸಿದೆ. ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಮೇಲೆ ಆಮ್ ಆದ್ಮಿ ಪಕ್ಷ(ಆಪ್)ದ ಇಬ್ಬರು ಶಾಸಕರು , ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆೆ.
ಘಟನೆ ಕುರಿತು ಕೇಜ್ರೀವಾಲ್ ಕ್ಷಮೆ ಯಾಚಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಯಾವುದೇ ಅಧಿಕಾರಿಗಳೂ ಮುಖ್ಯಮಂತ್ರಿ ಜೊತೆ ಫೋನಿನಲ್ಲಿ ಕೂಡಾ ಮಾತನಾಡುವುದಿಲ್ಲ ಹಾಗೂ ಅವರನ್ನು ಭೇಟಿಯಾಗುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಸಂಘಟನೆ ತಿಳಿಸಿದೆ. ಮುಖ್ಯ ಕಾರ್ಯದರ್ಶಿಯ ಮೇಲೆ ನಡೆದಿರುವ ಹಲ್ಲೆ ಘಟನೆಯು ದಿಲ್ಲಿಯ ರಾಜಕೀಯ ಕಾರ್ಯನಿರ್ವಾಹಕರ ಬಗ್ಗೆ ಸರಕಾರಿ ಸಿಬ್ಬಂದಿಗಳು ಇಟ್ಟಿದ್ದ ಭರವಸೆಯನ್ನು ಮಣ್ಣುಪಾಲು ಮಾಡಿದೆ. ತಮ್ಮ ನೋವನ್ನು ವ್ಯಕ್ತಪಡಿಸುವ ಸಲುವಾಗಿ ಕೆಲಸದ ದಿನ ಐದು ನಿಮಿಷ ವೌನಾಚರಣೆ ನಡೆಸಲಿದ್ದೇವೆ ಎಂದು ಸಂಘಟನೆ ತಿಳಿಸಿದೆ. ಹಲ್ಲೆ ನಡೆಸಿರುವ ಆರೋಪಿ ಶಾಸಕರಾದ ಅಮಾನತುಲ್ಲಾ ಖಾನ್ ಹಾಗೂ ಪ್ರಕಾಶ್ ಜರ್ವಾಲ್‌ರನ್ನು ಬುಧವಾರ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.







