ಆದಿತ್ಯನಾಥ್ ವಿರುದ್ಧದ ಅರ್ಜಿ ತಳ್ಳಿಹಾಕಿದ ಹೈಕೋರ್ಟ್
ಗೋರಖ್‌ಪುರ ಗಲಭೆ

ಅಲಹಾಬಾದ್, ಫೆ.22: ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಕಾನೂನುಕ್ರಮ ಜರಗಿಸಲು ರಾಜ್ಯ ಸರಕಾರ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿದೆ.
2007ರಲ್ಲಿ ಗೋರಖ್‌ಪುರದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಆದಿತ್ಯನಾಥ್ ಮಾಡಿದ್ದ ದ್ವೇಷ ಭಾಷಣ ಪ್ರೇರಣೆಯಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಜ್ಯಸರಕಾರ ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿರುವ ಕಾರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಫರ್ವೇಝ್ ಅಸಾದ್ ಹಯಾತ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಆದಿತ್ಯನಾಥ್ ವಿರುದ್ಧ ಕಾನೂನುಕ್ರಮ ಜರಗಿಸಲು ರಾಜ್ಯ ಸರಕಾರ ಅನುಮತಿ ನಿರಾಕರಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ಅರ್ಜಿಯಲ್ಲಿ ಪ್ರಸ್ತಾವಿಸಲಾದ ಘಟನೆ ಹಾಗೂ ಸಂದರ್ಭದ ಕುರಿತು ಚರ್ಚಿಸಲಾಯಿತು. ಆದಿತ್ಯನಾಥ್ ವಿರುದ್ಧ ಕಾನೂನುಕ್ರಮ ಜರಗಿಸಲು ಸರಕಾರ ಅನುಮತಿ ನಿರಾಕರಿಸಿದ್ದ ಕ್ರಮದಲ್ಲಿ ತಪ್ಪಿಲ್ಲವೆಂದು ಕಂಡು ಬಂದ ಕಾರಣ ಅರ್ಜಿಯನ್ನು ತಳ್ಳಿಹಾಕಲಾಗಿದೆ ಎಂದು ನ್ಯಾಯಾಧೀಶರಾದ ಕೃಷ್ಣಮುರಾರಿ ಹಾಗೂ ಅಖಿಲೇಶ್ ಚಂದ್ರ ಶರ್ಮ ಅವರಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ ತಿಳಿಸಿದೆ.
ಘಟನೆಯ ವೀಡಿಯೊ ಪುರಾವೆಯ ಕುರಿತು ನಡೆಸಿದ ತನಿಖೆಯಲ್ಲಿ ಭಿನ್ನತೆ ಇರುವುದು ಸ್ಪಷ್ಟವಾಗಿದೆ. ಈ ತೀರ್ಪಿನಿಂದ ನಿರಾಸೆಯಾಗಿದ್ದು, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಅರ್ಜಿದಾರರ ವಕೀಲರು ತಿಳಿಸಿದ್ದಾರೆ. ಹೈಕೋರ್ಟ್‌ನ ತೀರ್ಪನ್ನು ಸರಕಾರದ ಹೆಚ್ಚುವರಿ ವಕೀಲ ಎ.ಸಂದ್ ಸ್ವಾಗತಿಸಿದ್ದಾರೆ.
2007ರ ಜನವರಿಯಲ್ಲಿ ಮುಹರ್ರಂ ಮೆರವಣಿಗೆಯ ಸಂದರ್ಭ ಗೋರಖ್‌ಪುರದಲ್ಲಿ ಎರಡು ಸಮುದಾಯದವರ ಮಧ್ಯೆ ಘರ್ಷಣೆ ನಡೆದಿದ್ದು, ಯುವಕನೋರ್ವ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ್ದ, ಆಗ ಗೋರಖ್‌ಪುರ ಸಂಸದೀಯ ಕ್ಷೇತ್ರದ ಸಂಸದರಾಗಿದ್ದ ಆದಿತ್ಯನಾಥ್ ಹಿಂದೂ ಯುವಕನ ಸಾವಿಗೆ ಪ್ರತೀಕಾರ ಕೈಗೊಳ್ಳುವಂತೆ ಕರೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಭಾಷಣದ ವಿಡಿಯೋ ಸಾಕ್ಷ್ಯವಿದೆ ಎಂದು ಹೇಳಿದ್ದ ಸ್ಥಳೀಯ ಪತ್ರಕರ್ತ ಫರ್ವೇಝ್ ಎಂಬವರು ತಾನು ದೂರು ನೀಡಿದ್ದರೂ ಆದಿತ್ಯನಾಥ್ ಹಾಗೂ ಇತರ ನಾಲ್ವರು ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಹೈಕೋರ್ಟ್ ಸೂಚನೆ ಮೇರೆಗೆ 2008ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಆದರೆ ದ್ವೇಷ ಭಾಷಣದ ಪ್ರಮುಖ ಪುರಾವೆ ಎಂದು ಹೇಳಲಾಗಿರುವ ವಿಡಿಯೋವನ್ನು ತಿರುಚಲಾಗಿದೆ ಎಂದು ಹೇಳಿದ್ದ ಉತ್ತರಪ್ರದೇಶ ಸರಕಾರ, ಆದಿತ್ಯನಾಥ್ ಹಾಗೂ ಇತರ ನಾಲ್ವರ ವಿರುದ್ಧ ಕಾನೂನು ಕ್ರಮ ಜರಗಿಸಲು ಅವಕಾಶ ನಿರಾಕರಿಸಿತ್ತು. ಅಲ್ಲದೆ ಸಿಡಿಯ ಪರಿಶೀಲನೆ ನಡೆಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ, ವಿಡಿಯೋ ದೃಶ್ಯಾವಳಿಯಲ್ಲಿರುವ ಆದಿತ್ಯನಾಥ್ ಅವರ ಧ್ವನಿ ಗೋರಖ್‌ಪುರದ ಸಭೆಯಲ್ಲಿ ಮಾಡಿದ ಭಾಷಣದ ಸಂದರ್ಭದ್ದಲ್ಲ. ಇನ್ಯಾವುದೋ ಸಂದರ್ಭದಲ್ಲಿ ಹೇಳಿದ ಮಾತನ್ನು ಈ ಸಂದರ್ಭಕ್ಕೆ ಜೋಡಿಸಲಾಗಿದೆ ಎಂದು ತಿಳಿಸಲಾಗಿದೆ ಎಂದು ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಧಾವಿತ್‌ನಲ್ಲಿ ತಿಳಿಸಿತ್ತು. ಕೋಮು ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಪ್ರಕರಣದಲ್ಲಿ ಕಾನೂನುಕ್ರಮ ಜರಗಿಸಲು ಅನುಮತಿ ನೀಡುವ ಬಗ್ಗೆ ಸರಕಾರ ತೀರ್ಮಾನಿಸುತ್ತದೆ. ಆದರೆ ಗೋರಖ್‌ಪುರ ಪ್ರಕರಣದಲ್ಲಿ ಸ್ವಯಂ ಆದಿತ್ಯನಾಥ್ ಅವರೇ ತಮ್ಮ ಬಗ್ಗೆ ಕಾನೂನುಕ್ರಮ ಜರಗಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.







