ಈಶ್ವರಪ್ಪರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ : ಪುತ್ರ ಕೆ.ಇ.ಕಾಂತೇಶ್
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ

ಈಶ್ವರಪ್ಪ, ಕೆ.ಇ.ಕಾಂತೇಶ್
ಶಿವಮೊಗ್ಗ, ಫೆ. 22: 'ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಮ್ಮ ತಂದೆ ಕೆ.ಎಸ್.ಈಶ್ವರಪ್ಪರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದಲ್ಲಿನ ಅವರ ಹಿರಿತನಕ್ಕೆ, ಪ್ರಾಮಾಣಿಕ ಕಾರ್ಯನಿರ್ವಹಣೆಗೆ ವರಿಷ್ಠರು ಮನ್ನಣೆ ನೀಡುವ ವಿಶ್ವಾಸವಿದೆ' ಎಂದು ಅವರ ಪುತ್ರ, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಕೆ.ಇ.ಕಾಂತೇಶ್ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತಂತೆ ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕೆಜೆಪಿ ಗೊಂದಲದ ಕಾರಣದಿಂದ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಪರಾಭವಗೊಳ್ಳುವಂತಾಗಿತ್ತು. ಪ್ರಸ್ತುತ ಚುನಾವಣೆಯಲ್ಲಿ ಈ ಗೊಂದಲವಿಲ್ಲವಾಗಿದೆ. ಕೆ.ಎಸ್.ಈಶ್ವರಪ್ಪರವರು ಕಣಕ್ಕಿಳಿದರೆ ನೂರಕ್ಕೆ ನೂರರಷ್ಟು ಅವರ ಗೆಲುವು ಖಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ ಎಂದು ತಿಳಿಸಿದ್ದಾರೆ.
ಕೆ.ಎಸ್.ಈಶ್ವರಪ್ಪರವರು ಹಿರಿಯ ನಾಯಕರಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಪ್ರಭಾವ, ವರ್ಚಸ್ಸು ಹೊಂದಿದ್ದಾರೆ. ಪಕ್ಷದ ವರಿಷ್ಠರು ಅವರನ್ನು ಅಭ್ಯರ್ಥಿಯನ್ನಾಗಿಸುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಕಾರ್ಯಕರ್ತರಲ್ಲಿಯೂ ಇದೇ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹುಚ್ಚುತನದ ಹೇಳಿಕೆ: ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡದಂತೆ ಕೆಲವರು ಆಗ್ರಹಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, 'ಓರ್ವ ನಾಯಕರು ಮಾತ್ರ ಹುಚ್ಚುತನದ ಮಾತನಾಡಿದ್ದಾರೆ. ಈಗಾಗಲೇ ಇದನ್ನು ಪಕ್ಷದ ವರಿಷ್ಠರು ಗಮನಿಸಿದ್ದಾರೆ. ಸೂಕ್ತ ಕ್ರಮ ಜರುಗಿಸುವ ಸಾಧ್ಯತೆಯಿದೆ. ಉಳಿದಂತೆ ಇತರೆ ಬೇರೆ ನಾಯಕರ್ಯಾರು ವ್ಯತಿರಿಕ್ತ ಹೇಳಿಕೆ ನೀಡಿಲ್ಲ' ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲವಾಗಿದೆ. ಕೆಲ ಸಣ್ಣಪುಟ್ಟ ವಿಚಾರ ಬೇಧಗಳಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಕುಳಿತು ಪರಿಹರಿಸಿಕೊಳ್ಳಲಾಗುವುದು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆಯಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತ ಕಣಕ್ಕಿಳಿದರೂ ಜಯ ಸಾಧಿಸುವುದು ನಿಶ್ಚಿತ ಎಂದು ಪುನರುಚ್ಚರಿಸಿದರು.
ದಲಿತ, ಹಿಂದುಳಿದ ವರ್ಗಗಳ ಸಂಘಟನೆಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲಾಗಿತ್ತು. ಇದೊಂದು ರಾಜಕೀಯೇತರ ಸಂಘಟನೆಯಾಗಿದೆ. ಉತ್ತರ ಕರ್ನಾಟಕ ಭಾಗ ಸೇರಿದಂತೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ಸಂಘಟನೆಗೆ ವ್ಯಕ್ತವಾಗಿತ್ತು. ಕೆ.ಎಸ್.ಈಶ್ವರಪ್ಪರವರು ಇದಕ್ಕೆ ಮುಂದಾಳತ್ವ ವಹಿಸಿದ್ದರು ಎಂದರು.
ಸಂಘಟನೆಯ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಯಾವ ಸಂದರ್ಭದಲ್ಲಿಯೂ ಸ್ಥಗಿತವಾಗಿಲ್ಲ. ವಿವಿಧ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಂಘಟನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕೆ.ಎಸ್.ಈಶ್ವರಪ್ಪರ ಪರವಾಗಿ ಸಂಘಟನೆ ಕೆಲಸ ಮಾಡಲಿದೆ ಎಂಬುವುದರಲ್ಲಿ ಹುರುಳಿಲ್ಲವೆಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.







