‘ಗಣಿ ಅಧಿಕಾರಿ ವಿ.ಕೋದಂಡರಾಮಯ್ಯ ಅಮಾನತು: ದಸಂಸ ಮಹಾ ಒಕ್ಕೂಟದ ಹೋರಾಟಕ್ಕೆ ಸಂದ ಜಯ’
ಉಡುಪಿ, ಫೆ.22: ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತಿತಿದ್ದ ಹಿರಿಯ ಭೂವಿಜ್ಞಾನಿ ವಿ. ಕೋದಂಡರಾಮಯ್ಯ ಅವರನ್ನು ರಾಜ್ಯ ಸರಕಾರ ಅಮಾನತು ಮಾಡಿರುವುದನ್ನು ಉಡುಪಿ ಜಿಲ್ಲಾ ದಸಂಸ ಮಹಾ ಒಕ್ಕೂಟ ಸ್ವಾಗತಿಸಿದ್ದು, ಸಂಘಟನೆಯ ಎರಡು ತಿಂಗಳ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ಬಣ್ಣಿಸಿದೆ.
ಕೋದಂಡರಾಮಯ್ಯ ಇವರು ಗಣಿ ಇಲಾಖೆಯಲ್ಲಿ ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಫಿಯಾದೊಂದಿಗೆ ಶಾಮೀಲಾಗಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಸಿದ್ದು, ಇವರ ವಿರುದ್ಧ ಕಳೆದ 2 ತಿಂಗಳಿನಿಂದ ದ.ಸಂ.ಸ ಮಹಾಒಕ್ಕೂಟ ಜಿಲ್ಲಾ ಆಡಳಿತ, ರಾಜ್ಯ ಮಟ್ಟದ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳಿಗೆ ದೂರು ನೀಡಿ ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿತ್ತು ಒಕ್ಕೂಟ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಹಿರಿಯ ಭೂವಿಜ್ಞಾನಿ ಗಣಿ ಇಲಾಖೆಯಲ್ಲಿ ಅವ್ಯಾಹತ ಭ್ರಷ್ಟಾಚಾರ ನಡೆಸಿರುವುದು ತನಿಖೆಯಿಂದ ಸಾಬೀತಾಗಿದೆ. ಗಣಿ ಅಧಿಕಾರಿಯ ಅಮಾನತು ಮಹಾ ಒಕ್ಕೂಟ್ಟ ನಡೆಸಿದ ಸತತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮಹಾ ಒಕ್ಕೂಟದ ಸಹಭಾಗಿ ಸಂಘಟನೆಗಳ ಮುಖಂಡರುಗಳಾದ ವಿಜಯ ಕುಮಾರ್ ತಲ್ಲೂರು, ರಮೇಶ್ ಕೋಟ್ಯಾನ್ ಕೆಳಾರ್ಕಳಬೆಟ್ಟು, ಪ್ರಶಾಂತ್ ತೊಟ್ಟಂ, ವಿಶ್ವನಾಥ ಪೇತ್ರಿ, ಕೃಷ್ಣಬಜೆ ಕುಕ್ಕೆಹಳ್ಳಿ, ಚಂದ್ರ ಅಲ್ತಾರು, ಸುಂದರ ಎನ್. ಅಂಜಾರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರಿಂದಾಗಿ ಫೆ.28ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ ಮುಂದೆ ನಡೆಸಲು ನಿರ್ಧರಿಸಿರುವ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಮಹಾ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ ಗಣಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಭೂವಿಜ್ಞಾನಿಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆಯೂ ಒಕ್ಕೂಟ ಆಗ್ರಹಿಸಿದೆ.
ಅಮಾನತು: ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯಾದ ಕೋದಂಡರಾಮಯ್ಯ ಅವರನ್ನು ಗಂಭೀರವಾದ ಹಲವು ಕರ್ತವ್ಯಲೋಪ, ಕರ್ತವ್ಯ ನಿರ್ಲಕ್ಷದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಶಿಫಾರಸ್ಸಿನಂತೆ, ಇವರ ವಿರುದ್ಧ ಇರುವ ಆರೋಪಗಳ ಕುರಿತು ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ (ನಡತೆ), ನಿಯಮಾವಳಿ, 1966ರ ನಿಯಮ ಹಾಗೂ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಾವಳಿ, 1957ರ ನಿಯಮ 10(1)(ಡಿ) ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡಲಾಗಿದೆ ಎಂದು ಫೆ.17ರಂದು ಹೊರಡಿಸಲಾದ ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಅಮಾನತಿನಲ್ಲಿಟ್ಚಿರುವ ಅವಧಿಯಲ್ಲಿ ಕೋದಂಡರಾಮಯ್ಯ ಇವರು ನಿಯಮಗಳ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿದ್ದು, ಅಮಾನತಿನ ಅವಧಿಯಲ್ಲಿ ನಿಯಮಗಳ ಪ್ರಕಾರ ಸಕ್ಷಮ ಪ್ರಾಧಿಕಾರಿಯವರ ಲಿಖಿತ ಅನುಮತಿ ಪಡೆಯದೇ ಕೇಂದ್ರ ಕಾರ್ಯಸ್ಥಾನ ಬಿಡುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.







