ಹಿರಿಯ ಭೂವಿಜ್ಞಾನಿ ಅಮಾನತು: ಜಿಪಂ ಸದಸ್ಯರ ಆಕ್ಷೇಪ ದಾಖಲು

ಮಣಿಪಾಲ, ಫೆ.22: ಉಡುಪಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿ.ಕೋದಂಡರಾಮಯ್ಯ ಅವರನ್ನು ಅಮಾನತು ಮಾಡಿರುವುದರ ವಿರುದ್ಧ ಇಂದು ನಡೆದ ಉಡುಪಿ ಜಿಪಂನ 11ನೇ ಸಾಮಾನ್ಯ ಸಭೆಯಲ್ಲಿ ಆಡಳಿತ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲು ಪಟ್ಟು ಹಿಡಿದರಾದರೂ ಕೊನೆಗೆ ಸದಸ್ಯರ ಆಕ್ಷೇಪ ದಾಖಲಿಸಿಕೊಳ್ಳಲಾಯಿತು.
ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ 11ನೇ ಸಾಮಾನ್ಯ ಸಭೆಯಲ್ಲಿ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾದ ವಿ.ಕೋದಂಡರಾಮಯ್ಯ ಅವರನ್ನು ಯಾವುದೇ ನೋಟೀಸು ನೀಡದೇ, ವಿಚಾರಣೆ ನಡೆಸದೇ ಅಮಾನತು ಗೊಳಿಸಲಾಗಿದ್ದು, ಇದರ ವಿರುದ್ಧ ಜಿಪಂನ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದರು.
ರಾಘವೇಂದ್ರ ಕಾಂಚನ್‌ರ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿದ ಪ್ರತಾಪ್ ಹೆಗ್ಡೆ ಮರಾಳಿ, ಕೋದಂಡರಾಮಯ್ಯ ಅವರಿಗೆ ಒಂದು ನೋಟೀಸನ್ನು ನೀಡದೇ, ಅವರ ಅಭಿಪ್ರಾಯವನ್ನು ತಿಳಿಸಲು ಅವಕಾಶ ನೀಡದೇ ಅಮಾನತು ಮಾಡಲಾಗಿದೆ. ವಜಾ ಮಾಡುವ ಮುನ್ನ ಸಂಪ್ರದಾಯದಂತೆ ಅವರ ಹೇಳಿಕೆ ಪಡೆಯಬೇಕು. ಆದರೆ ಜಿಲ್ಲಾಡಳಿತ ಇಲ್ಲಿ ಸರ್ವಾಧಿಕಾರಿ ಪ್ರವೃತ್ತಿ ತೋರಿದೆ. ಹೀಗಾಗಿ ಖಂಡನಾ ನಿರ್ಣಯ ಮಾಡಬೇಕು ಎಂದರು.
ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಯನ್ನು ಅಮಾನತು ಮಾಡಿರುವುದು ಯಾತಕ್ಕೆ ಎಂಬುದನ್ನು ತಿಳಿಸಿ. ನಮಗೆ ಯಾವುದೇ ಮಾಹಿತಿ ಇಲ್ಲದೇ ಖಂಡನಾ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಅವರಿಗೆ ಸುಧಾಕರ ಶೆಟ್ಟಿ ಮೈರ್ಮಾಡಿ, ಗೌರಿ ದೇವಾಡಿಗ, ವಿಲ್ಸನ್ ರಾಡ್ರಿಗಸ್ ಬೆಂಬಲ ನೀಡಿದರು.
ಈ ಹಂತದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷರು ಬಿಜೆಪಿ ಸದಸ್ಯರ ಪರ ನಿಂತರು. ಅಧಿಕಾರಿಯ ಅಮಾನತಿನ ಬಗ್ಗೆ ನಮಗೆ ಮೊದಲು ಮಾಹಿತಿ ನೀಡಿ. ಯಾರು, ಯಾಕೆ ಅಮಾನತು ಮಾಡಿದರು ಎಂಬುದನ್ನು ತಿಳಿಸಿ ಎಂದು ತೋನ್ಸೆ ಪಟ್ಟು ಹಿಡಿದರು.
ಅಧಿಕಾರಿಗೆ ಆತ ಮಾಡಿರುವ ತಪ್ಪಿನ ಬಗ್ಗೆ ತಿಳಿಸಿಲ್ಲ, ದಾಖಲೆಯೇ ಇಲ್ಲದೇ ಒಬ್ಬನನ್ನು ಹೇಗೆ ಅಮಾನತು ಮಾಡುತ್ತಾರೆ ಎಂದು ಪ್ರತಾಪ್ ನುಡಿದರು. ಎರಡು ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಬಹುಮತದ ನಿರ್ಧಾರ ಕೈಗೊಳ್ಳೋಣ ಎಂದರು. ಹಾಗಿದ್ದರೆ ಖಂಡನಾ ನಿರ್ಣಯಕ್ಕೆ ನಮ್ಮ ಆಕ್ಷೇಪಗಳನ್ನು ದಾಖಲಿಸಿ ಎಂದು ತೋನ್ಸೆ, ಗೌರಿ ದೇವಾಡಿಗ ಪಟ್ಟು ಹಿಡಿದರು.
ಈ ಹಂತದಲ್ಲಿ ಮಾಹಿತಿ ನೀಡಿದ ಇಲಾಖೆಯ ಅಧಿಕಾರಿಯೊಬ್ಬರು, ಹಿರಿಯ ಭೂವಿಜ್ಞಾನಿ ಅವರು ಮಾಡಿರುವ ಕರ್ತವ್ಯ ಲೋಪ ಹಾಗೂ ಕರ್ತವ್ಯ ನಿರ್ಲಕ್ಷದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಶಿಫಾರಸ್ಸಿನಂತೆ ಸರಕಾರದ ಗಣಿ, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆರೋಪಗಳ ಕುರಿತು ವಿಚಾರಣೆಯನ್ನು ಕಾಯ್ದಿರಿಸಿ ಅಮಾನತಿನ ಆದೇಶ ಹೊರಡಿಸಿದ್ದು, ಫೆ.19ರಿಂದ ಅಧಿಕಾರಿ ಅಮಾನತಿನಲ್ಲಿದ್ದಾರೆ ಎಂದರು.
ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವಂತೆ ಅಧಿಕಾರಿಯನ್ನು ಕೋರಿದ ಬಳಿಕ ಅವರು ನೀಡಿದ ಮಾಹಿತಿಯಂತೆ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲು ಬರುವುದಿಲ್ಲ ಎಂದು ಸಭೆಯಲ್ಲಿ ಸಿಇಒ ಗೈರುಹಾಜರಿಯಲ್ಲಿ ಸಭೆಯನ್ನು ನಡೆಸಿಕೊಟ್ಟ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ತಿಳಿಸಿದರು. ಇದರಂತೆ ಕೋದಂಡರಾಮಯ್ಯ ಅವರ ಅಮಾನತಿನ ಕುರಿತಂತೆ ಜಿಪಂ ಸದಸ್ಯರ ಆಕ್ಷೇಪವನ್ನು ದಾಖಲಿಸಲಾಯಿತು.
ಇದಕ್ಕೆ ಮೊದಲು ಫೆ.2ರಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಸಭೆ ಕೋರಂ ಕೊರತೆಯಿಂದ ನಡೆಯದಿರುವಾಗ ಅದು ನಡವಳಿಯಲ್ಲಿ ಹೇಗೆ ದಾಖಲಾಗುತ್ತದೆ ಎಂದು ಜನಾರ್ದನ ತೋನ್ಸೆ ವಿಷಯಸೂಚಿಯ ಬಗ್ಗೆ ಆಕ್ಷೇಪಿಸಿದರು. ಕಾಂಗ್ರೆಸ್‌ನ ಗೌರಿ ದೇವಾಡಿಗ ಮಾತನಾಡಿ ಸ್ಥಾಯಿ ಸಮಿತಿಗೆ ತನ್ನನ್ನು ಸದಸ್ಯೆಯಾಗಿ ಆಯ್ಕೆ ಮಾಡಿರುವ ಬಗ್ಗೆ ನನಗೆ ಯಾರೂ ಯಾವುದೇ ಮಾಹಿತಿ ನೀಡಿಲ್ಲ. ಸಭೆಗೆ ಹಿಂದಿನ ದಿನ ರಾತ್ರಿ ಜಿಪಂನಿಂದ ಮರುದಿನ ಸಭೆಯ ಬಗ್ಗೆ ತಿಳಿಸಲಾಯಿತು ಎಂದು ದೂರಿದರು. ಈ ಕುರಿತಂತೆ ಕೆಲ ಹೊತ್ತು ಆಡಳಿತ ಪಕ್ಷ ಹಾಗೂ ವಿಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಹಾಗು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.







