ಬ್ರಹ್ಮಾವರ: ಫೆ.26ರಂದು ಸಚಿವರಿಂದ ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ
ಉಡುಪಿ, ಫೆ.22: ಅರ್ಹರಿಗೆ ಪಡಿತರ ಚೀಟಿ ಶೀಘ್ರ ಒದಗಿಸಿ ಕೊಡುವ ಉದ್ದೇಶದಿಂದ ಉಡುಪಿ ಕ್ಷೇತ್ರದ ಬ್ರಹ್ಮಾವರ ಪರಿಸರದ ಸುತ್ತಮುತ್ತಲಿನ ಗ್ರಾಪಂ ಗಳ ಎಲ್ಲಾ ಅರ್ಜಿದಾರರಿಗೆ ಫೆ.26ರಂದು ಬೆಳಗ್ಗೆ 10 ಕ್ಕೆ ಬ್ರಹ್ಮಾವರದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ಷೇತ್ರದ ಜನತೆ ಪಡಿತರ ಚೀಟಿಗಾಗಿ ಅಲೆದಾಡಬಾರದು. ಹೋಬಳಿ ಮಟ್ಟದಲ್ಲಿ ಬಡವರಿಗೆ ಅನುಕೂಲವಾಗುವಂತೆ ಬಿಪಿಎಲ್ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಈಗಾಗಲೇ ಕ್ಷೇತ್ರದ ಹೆಚ್ಚಿನ ಅರ್ಜಿದಾರ ರಿಗೆ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸಲಾಗಿದ್ದು, ಮೂರನೇ ಹಂತದಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಾಗೂ ಹಿಂದಿನ ಅರ್ಜಿಯ ಪಡಿತರ ಚೀಟಿ ಬರದಿದ್ದಲ್ಲಿ ಅಂತಹವರಿಗೆ ಅವಕಾಶವಾಗಲು ಈ ಅನುಕೂಲ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಿದವರು ಸ್ವೀಕೃತಿ ಪತ್ರ, ಆದಾಯ ಪ್ರಮಾಣಪತ್ರದ ಪ್ರತಿ, ಪಡಿತರ ಚೀಟಿಗೆ ನಮೂದಿಸಿದ ಕುಟುಂಬ ಸದಸ್ಯರ ಆಧಾರ್ ಪ್ರತಿ ತಂದು ಚೀಟಿ ಪಡೆದುಕೊಳ್ಳಬಹುದು. 1.20 ಲಕ್ಷ ರೂ. ಒಳಗೆ ವಾರ್ಷಿಕ ಆದಾಯ ಹೊಂದಿರುವ ಬಿಪಿಎಲ್ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸಲಾ ಗುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.





