ಉಡುಪಿ: ಬಡ್ತಿಯಲ್ಲಿ ಮೀಸಲಾತಿ ಕುರಿತ ಜಿಲ್ಲಾ ಮಟ್ಟದ ಸಮಾವೇಶ
ಉಡುಪಿ, ಫೆ.22: ಮೀಸಲಾತಿ ಸಂರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ‘ಬಡ್ತಿಯಲ್ಲಿ ಮೀಸಲಾತಿ’ ಕುರಿತ ಒಂದು ದಿನ ಜಿಲ್ಲಾ ಮಟ್ಟದ ಸಮಾವೇಶ ಫೆ.25ರಂದು ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಜೇಯ ಕುಮಾರ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಬದ್ಧ ಮೀಸಲಾತಿಯಿಂದ 68 ವರ್ಷಗಳಲ್ಲಿ ಪ.ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ದೊರಕಿರುವ ಲಾಭ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ, ಕೊಟ್ಟಿರುವ ಅಲ್ಪ ಮೀಸಲಾತಿಯನ್ನು ಕೂಡಾ ಕಿತ್ತುಕೊಳ್ಳುವ ಹುನ್ನಾರ ಇತ್ತೀಚಿನ ಬೆಳವಣಿಗೆಗಳಿಂದ ಸಾಬೀತಾಗಿದೆ ಎಂದರು.
ಆಳುವ ವರ್ಗಗಳು ತಮ್ಮ ಮೀಸಲಾತಿ ವಿರೋಧಿ ನೀತಿಯನ್ನು ಪರೋಕ್ಷ ಮಾರ್ಗಗಳ ಮೂಲಕ ಹೇರಿ ನಮ್ಮ ಹಕ್ಕುಗಳನ್ನು ಕಸಿದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಕತ್ತಲಿಗೆ ನೂಕುವ ಪ್ರಯತ್ನ ನಡೆಸಿದೆ ಎಂದು ದೂರಿದರು.
ದೇಶದ ಸರ್ವೋಚ್ಚ ನ್ಯಾಯಾಲಯವು ಎಸ್‌ಸಿ, ಎಸ್‌ಟಿ ನೌಕರರಿಗೆ ಸರಕಾರಿ ಹುದ್ದೆಗಳಲ್ಲಿ ನೀಡಿದ ಭಡ್ತಿಯಲ್ಲಿನ ಮೀಸಲಾತಿ ಸೌಲಭ್ಯವನ್ನು ರದ್ದುಗೊಳಿಸಿ ಕೂಡಲೇ ಹಿಂಬಡ್ತಿ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಆದೇಶಿಸಿದ್ದು, ಈ ಆದೇಶದಿಂದ ನಮಗಾದ ಅನ್ಯಾಯವನ್ನು ಸರಿಪಡಿಸಲು ನಡೆಸಿದ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ನೌಕರಿಗೆ ಭಡ್ತಿಯಲ್ಲಿ ಮೀಸಲಾತಿ ದೊರಕಿಸುವ ಮಸೂದೆಯನ್ನು ಸರಕಾರ ಮಂಡಿಸಿ ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದೆ. ರಾಜ್ಯಪಾಲರು ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದು, ಈ ಮಸೂದೆ ಈಗ ರಾಷ್ಟ್ರಪತಿಗಳ ಅಂಕಿತಕ್ಕೆ ಬಾಕಿ ಇದೆ. ಈ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಭಡ್ತಿಯಲ್ಲಿನ ಮೀಸಲಾತಿಯನ್ನು ರಕ್ಷಿಸಿಕೊಳಳುವ ಬಗ್ಗೆ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯದ ಮನವಿಯಲ್ಲಿ ಸಲ್ಲಿಸಲು ಫೆ.25ರ ರವಿವಾರ ಈ ಸಮಾವೇಶ ನಡೆಯುತ್ತಿದೆ ಎಂದರು.
ಅಂದು ಬೆಳಗ್ಗೆ 10 ಗಂಟೆಗೆ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆಯುವ ಎಸ್‌ಸಿ, ಎಸ್‌ಟಿ ನೌಕರರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಡ್ತಿ ಮೀಸಲಾತಿ ವಿಷಯವಾಗಿ ರಾಜ್ಯ ಮೀಸಲಾತಿ ಸಂರಕ್ಷಣಾ ಸಮಿತಿ ಸದಸ್ಯ ನಾಗ ಸಿದ್ಧಾರ್ಥ ಹೊಲೆಯಾರ್ ಹಾಗೂ ಲೋಕೇಶ್ ಹಾಸನ್ ಅವರು ಉಪಸ್ಥಿತರಿದ್ದು ಮಾತನಾಡಲಿದ್ದಾರೆ ಎಂದು ಅಜೇಯ್ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾದ್ಯಕ್ಷ ಸುಂದರ್ ಮಾಸ್ತರ್, ಖಜಾಂಚಿ ಪ್ರಕಾಶ್ ಬಿ.ಬಿ., ಕಾನೂನು ಸಲಹೆಗಾರ ಮಂಜುನಾಥ ವಿ. ಹಾಗೂ ಸದಾನಂದ ಮಾಸ್ತರ್ ಉಪಸ್ಥಿತರಿದ್ದರು.







