ಶಾಲೆಗಳಲ್ಲಿ ಹತ್ಯಾಕಾಂಡ ತಡೆಗೆ ಶಿಕ್ಷಕರಿಗೆ ಬಂದೂಕು
ಹೆಚ್ಚುತ್ತಿರುವ ಬಂದೂಕು ದಾಳಿಗಳಿಗೆ ಟ್ರಂಪ್ ಪರಿಹಾರ!

ವಾಶಿಂಗ್ಟನ್, ಫೆ. 22: ಶಿಕ್ಷಕರಿಗೆ ಬಂದೂಕು ನೀಡಿದರೆ ಕಳೆದ ವಾರ ಫ್ಲೋರಿಡ ಹೈಸ್ಕೂಲ್‌ನಲ್ಲಿ ನಡೆದ ಹತ್ಯಾಕಾಂಡದಂಥ ಘಟನೆಗಳನ್ನು ತಡೆಯಲು ಸಾಧ್ಯವಾಗಬಹುದು ಎಂಬ ಅಭಿಪ್ರಾಯವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಹತ್ಯಾಕಾಂಡದಲ್ಲಿ ಬದುಕುಳಿದ ವಿದ್ಯಾರ್ಥಿಗಳು ಮತ್ತು ಬದುಕುಳಿಯದ ವಿದ್ಯಾರ್ಥಿಯೋರ್ವನ ತಂದೆ ಜೊತೆಗೆ ಶ್ವೇತಭವನದಲ್ಲಿ ಒಂದು ಗಂಟೆ ಕಾಲ ನಡೆದ ಭಾವನಾತ್ಮಕ ಸಭೆಯಲ್ಲಿ ಟ್ರಂಪ್ ತನ್ನ ಈ ಅಭಿಪ್ರಾಯವನ್ನು ಮುಂದಿಟ್ಟರು.
ಅದೇ ವೇಳೆ, ವಾಶಿಂಗ್ಟನ್, ಶಿಕಾಗೊ ಮತ್ತು ಪಿಟ್ಸ್‌ಬರ್ಗ್ ಸೇರಿದಂತೆ ಬುಧವಾರ ದೇಶಾದ್ಯಂತ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಂದೂಕು ಖರೀದಿದಾರರ ಹಿನ್ನೆಲೆ ಪರಿಶೀಲನೆಯನ್ನು ಬಿಗಿಗೊಳಿಸಲು ತಾನು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಹಾಗೂ ಕೆಲವು ಮಾದರಿಯ ಬಂದೂಕುಗಳ ಖರೀದಿ ಪ್ರಾಯವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ರಿಪಬ್ಲಿಕನ್ ಪಕ್ಷಕ್ಕೆ ಸೇರಿದ ಅಧ್ಯಕ್ಷರು ಹೇಳಿದರು.
2016ರ ಚುನಾವಣಾ ಪ್ರಚಾರ ಅವಧಿಯಲ್ಲಿ ಟ್ರಂಪ್ ಬಂದೂಕು ಹೊಂದುವ ಹಕ್ಕಿನ ಪರವಾಗಿ ಮಾತನಾಡಿದ್ದರು ಹಾಗೂ ಅದಕ್ಕಾಗಿ ಪ್ರಭಾವಿ ಸಂಘಟನೆ ನ್ಯಾಶನಲ್ ರೈಫಲ್ಸ್ ಅಸೋಸಿಯೇಶನ್ (ಎನ್‌ಆರ್‌ಎ) ಅವರನ್ನು ಬೆಂಬಲಿಸಿತ್ತು.
ಶಾಲೆಯಲ್ಲಿ ಗುಂಡಿನ ದಾಳಿ ನಡೆಸುವವರನ್ನು ಶಸ್ತ್ರಧಾರಿ ಶಿಕ್ಷಕರು ಮತ್ತು ಭದ್ರತಾ ಸಿಬ್ಬಂದಿ ಹೇಗೆ ಹೆದರಿಸಬಹುದು ಹಾಗೂ ವಿದ್ಯಾರ್ಥಿಗಳ ಹತ್ಯೆಗಳನ್ನು ತಪ್ಪಿಸಬಹುದು ಎಂಬ ಬಗ್ಗೆ ಟ್ರಂಪ್ ವಿವರವಾಗಿ ಮಾತನಾಡಿದರು.
ಫ್ಲೋರಿಡದ ಪಾರ್ಕ್‌ಲ್ಯಾಂಡ್‌ನಲ್ಲಿರುವ ಮ್ಯಾರ್ಜರಿ ಡಗ್ಲಸ್ ಹೈಸ್ಕೂಲ್‌ನಲ್ಲಿ ಫೆಬ್ರವರಿ 14ರಂದು ನಡೆದ ಹಳೆ ವಿದ್ಯಾರ್ಥಿಯೊಬ್ಬ ಎಆರ್-15 ಅರೆ ಸ್ವಯಂಚಾಲಿತ ಬಂದೂಕಿನಿಂದ ನಡೆಸಿದ ದಾಳಿಯಲ್ಲಿ 17 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮೃತಪಟ್ಟಿದ್ದಾರೆ.







